ಕೃಷಿ ತ್ಯಾಜ್ಯ ಮರುಬಳಕೆಗೆ ನೂತನ ಯಂತ್ರ ಆವಿಷ್ಕಾರ

ಕೃಷಿ ತ್ಯಾಜ್ಯ ಮರುಬಳಕೆಗೆ ನೂತನ ಯಂತ್ರ ಆವಿಷ್ಕಾರ
Published on

ಬೆಟ್ಟದಪುರ: ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಐಟಿಸಿ ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಕೃಷಿ ತ್ಯಾಜ್ಯ ಮರುಬಳಕೆ ಮಾಡುವ ಬಯೋಚಾರ್ ಎಂಬ ನೂತನ ಯಂತ್ರ ಆವಿಷ್ಕಾರ ಮಾಡಿದೆ.

ಕೃಷಿ ತ್ಯಾಜ್ಯವನ್ನು ಜೈವಿಕ ಇದ್ದಿಲಾಗಿ ಪರಿವರ್ತಿಸಿ ಮತ್ತೆ ಮರುಬಳಕೆ ಮಾಡುವ ಮೂಲಕ ರೈತರು ಹೆಚ್ಚು ಆದಾಯ ಗಳಿಸುವ ನಿಟ್ಟಿನಲ್ಲಿ ಬಯೋಚಾರ್ ಸಹಕಾರಿಯಾಗಲಿದೆ. ಈಗಾಗಲೇ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕೂರಗಲ್ಲು, ತೆಲಗಿನಕುಪ್ಪೆ ಸೇರಿದಂತೆ ವಿವಿಧ ಗ್ರಾಮದಲ್ಲಿ ರೈತರು ಮೈಕ್ಯಾಪ್ಸ್ ಸಿಬ್ಬಂದಿ ಮಾರ್ಗದರ್ಶನದಲ್ಲಿ ಬಯೋಚಾರ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನಲ್ಲಿ ಯಥೇಚ್ಛವಾಗಿ ತಂಬಾಕು ಬೆಳೆ ಬೆಳೆಯುವುದರಿಂದ ತಂಬಾಕು ಎಲೆ ಮುರಿದ ನಂತರ ಉಳಿಯುವ ಕಡ್ಡಿ, ಜೋಳದ ದಿಂಡು, ತೆಂಗಿನ ಸಿಪ್ಪೆ ಹಾಗೂ ಮರದ ಅನುಪಯುಕ್ತ ರೆಂಬೆಗಳನ್ನು ಬಳಸಿ ಬಯೋಚಾರ್ ಮೂಲಕ ಜೈವಿಕ ಇದ್ದಿಲು ತಯಾರಿಸಿ ರೈತರು ರಾಗಿ ಮತ್ತು ತೆಂಗಿನ ಬೆಳೆಗಳಿಗೆ ಉಪಯೋಗಿಸುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಿ ಸಾವಯುವ ಇಂಗಾಲ ಜಾಸ್ತಿಯಾಗುತ್ತದೆ ಮತ್ತು ರಾಸಾಯನಿಕ ವಸ್ತುಗಳ ಬಳಕೆ ಕಡಿಮೆ ಮಾಡಬಹುದಾಗಿದೆ.

ಬಯೋಚಾರ್ ತಯಾರಿಕೆ ವಿಧಾನ: ದೊಡ್ಡ ಡ್ರಮ್‌ನ ತಳ ಭಾಗದ ಸ್ವಲ್ಪ ಮೇಲೆ ಹಾಗೂ ಮೇಲ್ಭಾಗದ ಸ್ವಲ್ಪ ಕೆಳಗೆ ರಂಧ್ರಗಳನ್ನು ಮಾಡಿ ಕೃಷಿ ತ್ಯಾಜ್ಯಗಳನ್ನು ಡ್ರಮ್ ಒಳಭಾಗ ತುಂಬಿ ಮುಚ್ಚಳ ಹಾಕಿ ಭದ್ರ ಮಾಡಿದ ನಂತರ ಡ್ರಮ್ ಮೇಲ್ಭಾಗದಲ್ಲಿ ಬೆಂಕಿ ಹಾಕಿ ಸುಮಾರು 500 ರಿಂದ 600 ಡಿಗ್ರಿ ಉಷ್ಣಾಂಶದಲ್ಲಿ ಸುಡಲಾಗುತ್ತದೆ. ಬಳಿಕ ಡ್ರಮ್ ಸುತ್ತ ನೀರು ಹಾಕಿ ತ್ಯಾಜ್ಯ ಸರಿಯಾಗಿ ಸುಟ್ಟಿದೆ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆ ಮುಚ್ಚಳ ತೆಗೆದಾಗ ಬಯೋಚಾರ್ ತಯಾರಾಗಿರುತ್ತದೆ.

ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಫುಲ್ ಹಸನ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಯೋಜನೆ ಸಮನ್ವಯಾಧಿಕಾರಿ ರಾಜಪ್ಪ ಹಾಗೂ ಕಾರ್ಯಕ್ರಮ ಸಂಯೋಜಕ ಮಹದೇವಯ್ಯ, ಕೃಷಿ ಅಧಿಕಾರಿ ವೀಣಾ ಅವರ ನೇತೃತ್ವ ನಂಜನಗೂಡು ತಾಲೂಕಿನಲ್ಲಿ ಮೈಕ್ಯಾಪ್ಸ್ ಸಿಬ್ಬಂದಿ ದೇವರಾಜು, ರಾಜೇಗೌಡ, ಮಹದೇವ್ ಪ್ರಸಾದ್, ರವಿ, ಶ್ರೀಕಂಠಮೂರ್ತಿ ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಕಾರ್ತಿಕ್, ಕೃಷ್ಣಚಾರಿ, ಸಂಜಯ್ ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಯೋಚಾರ್ ಪ್ರಾತ್ಯಕ್ಷಿತೆ ಮೂಲಕ ರೈತರಿಗೆ ನೂತನ ಕೃಷಿ ಆವಿಷ್ಕಾರ ಪರಿಚಯಿಸಿ ಅರಿವು ಮೂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net