

* ಅಧ್ಯಕ್ಷ ಕೆ.ಶೇಷಾದ್ರಿ ಬಜೆಟ್ ಮಂಡನೆ
* 78.21 ಕೋಟಿ ರೂ. ಆದಾಯ ನಿರೀಕ್ಷೆ
* ಯುವ ತಲೆಮಾರಿಗೆ ಉದ್ಯೋಗ ತರಬೇತಿ ಭರವಸೆ
ರಾಮನಗರ
ನಗರ ಸೌಂದರ್ಯ ವರ್ಧನೆ ಸಂಕಲ್ಪ, ಸ್ಮಾರ್ಟ್ ರಾಮನಗರ ಕನಸಿನೊಂದಿಗೆ ಅಭಿವೃದ್ಧಿ ಕಡೆಗೆ ಹೆಜ್ಜೆ ಇಡುವ ಭರವಸೆಯ ಬಜೆಟ್ ಅನ್ನು ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಂಡಿಸಿದರು.
ನಗರಸಭೆ ಪ್ರಶಸ್ತಿ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೆ.ಶೇಷಾದ್ರಿ, ಕಳೆಗುಂದಿರುವ ಜಿಲ್ಲಾಕೇಂದ್ರಕ್ಕೆ ಹೊಸ ರೂಪ ನೀಡುವ ಯೋಜನೆ ಘೋಷಣೆ ಮಾಡುವ ಜತೆಗೆ ವಿವಿಧ ಸಮುದಾಯಗಳಿಗೆ ಪೂರಕವಾಗುವ ಹಾಗೂ ಯುವ ತಲೆಮಾರಿಗೆ ಬೇಕಾದ ಉದ್ಯೋಗ ತರಬೇತಿ ನೀಡುವ ಭರವಸೆ ನೀಡಿದರು.
ಒಟ್ಟು ಆರಂಭಿಕ ಶಿಲ್ಕು ಮತ್ತು ನಗರಸಭೆ ಆದಾಯದ 78.21 ಕೋಟಿ ರೂ. ಜಮೆಯಲ್ಲಿ 77.57 ಕೋಟಿ ರೂ. ಗಳನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ರೂಪರೇಷೆಯನ್ನು ತಿಳಿಸಿದ ಅಧ್ಯಕ್ಷರು, ಇದರಲ್ಲಿ 63.70 ಲಕ್ಷ ರೂ.ಗಳನ್ನು ಉಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಘೋಷಣೆ ಮಾಡಿದಂತೆ ಐ ಲವ್ ರಾಮನಗರ ಫಲಕ ಸ್ಥಾಪನೆ, ಕೆಂಪೇಗೌಡ ವೃತ್ತ, ರೈಲ್ವೆ ಸ್ಟೇಷನ್ ಸರ್ಕಲ್‌ನಲ್ಲಿ ಕ್ಲಾಕ್ ಟವರ್ ನಿರ್ಮಾಣ, ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ನೀರಿನ ಕಾರಂಜಿ, ಶ್ರೀ ಕೆಂಗಲ್ ಹನುಮಂತಯ್ಯ ಪ್ರತಿಮೆ ವೃತ್ತದಲ್ಲಿ ದೀಪಾಲಂಕಾರ, ಎಲ್ಲ ವಾರ್ಡ್‌ಗಳಿಗೆ ನಾಮಫಲಕ ಹಾಕುವ ಮೂಲಕ ನಗರಕ್ಕೆ ಹೊಸ ರೂಪ ನೀಡಲು ಮುಂದಾಗಲಾಗಿದೆ.
ನಗರದಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೂ ಸಹ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಪರಿಸರ ಸಂರಕ್ಷಣೆಗಾಗಿ ನಗರದಲ್ಲಿ 2 ಸಾವಿರ ಸಸಿ ನೆಡುವುದು, ನಗರವನ್ನು ಪ್ಲಾಸ್ಟಿಕ್‌ಮುಕ್ತವಾಗಿಸಲು 10 ಸಾವಿರ ಬಟ್ಟೆ ಕೈ ಚೀಲ ವಿತರಣೆ ಮಾಡಲು ಕ್ರಮ, ಡೇ ನಲ್ಮ್ ಯೋಜನೆಯಡಿ ಸ್ವ ಸಹಾಯ ಗುಂಪುಗಳನ್ನು ತೊಡಗಿಸಿಕೊಂಡು ಗಾಂಧಿ ಸ್ಮಾರಕ ಮತ್ತು ಐಜೂರು ಉದ್ಯಾನವನ ನಿರ್ವಹಣೆ, ನಗರದ ಪಿಡಬ್ಲುೃಡಿ ವೃತ್ತದಿಂದ ರೈಲ್ವೆ ಸ್ಟೇಷನ್ ವೃತ್ತದವರೆಗೆ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಬೆಂಚ್ ಹಾಕಲೂ ನಿರ್ಧರಿಸಲಾಗಿದೆ.
ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೈಸೂರು ಕಡೆಗೆ ತೆರಳುವ ವೃತ್ತದಲ್ಲಿ ಸ್ಮಾರ್ಟ್‌ಬಸ್ ನಿಲ್ದಾಣ ನಿರ್ಮಾಣ ಮಾಡಿ, ಸ್ಮಾರ್ಟ್ ಡಸ್ಟ್ ಬಿನ್, ಡಿಜಿಟಲ್ ಟೈಮಿಂಗ್ ಡಿಸ್ ಪ್ಲೇ, ವೈ ಫೈ ಚಾರ್ಜಿಂಗ್ ಪಾಯಿಂಟ್, ಸ್ನಾಕ್ಸ್ ವೆಂಡಿಂಗ್ ಬಾಕ್ಸ್, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಬಾಕ್ಸ್ ಇತ್ಯಾದಿ ಸೌಲಭ್ಯ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಹೊಸ ಬಸ್ ನಿಲ್ದಾಣ ನಿರ್ಮಾಣದ ಕನಸು ಬಿತ್ತಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಯೋಜನೆ ಘೋಷಣೆ ಮಾಡಿರುವ ಕೆ.ಶೇಷಾದ್ರಿ, ಇದಕ್ಕಾಗಿ 15 ಲಕ್ಷ ರೂ. ಮೀಸಲಿಟ್ಟಿದ್ದಾರೆ. ಜತೆಗೆ ಐಪಿಎಲ್, ಕೆಪಿಎಲ್ ಮಾದರಿಯಲ್ಲಿ ಆರ್‌ಪಿಎಲ್ ಕ್ರಿಕೆಟ್ ಟೂರ್ನಿಯನ್ನು ವರ್ಷಕ್ಕೆ ಒಮ್ಮೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ವಿಧಾನಸೌಧ ನಿರ್ಮಾತೃ ರಾಮನಗರ ತಾಲೂಕಿನವರೇ. ಆದರೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸ್ಮರಣಾರ್ಥ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ವೇಳೆ ಶ್ರೀ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಘೋಷಣೆ ಮಾಡಿದರು.
ನಗರ ಪ್ರದೇಶ ವ್ಯಾಪ್ತಿಯ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಐಎಎಸ್, ಕೆಎಎಸ್, ಪಿಎಸ್‌ಐ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು, ಇದರ ಜತೆಗೆ ವೃತಿಪರ ಕೋರ್ಸ್‌ಗಳಾದ ಸಿಇಟಿ, ಜೆಇಇ, ನೀಟ್ ಪರೀಕ್ಷಾ ತರಬೇತಿ ಕೇಂದ್ರ ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡುವುದಾಗಿ ಕೆ.ಶೇಷಾದ್ರಿ ಬಜೆಟ್‌ನಲ್ಲಿ ಭರವಸೆ ನೀಡಿದರು.
ಮೈಸೂರು ಪಾಕ್ ಬ್ರಾೃಂಡಿಂಗ್
ನಗರದ ಪ್ರಸಿದ್ಧ ಸಿಹಿ ತಿನಿಸು ಜನಾರ್ದನ್ ಹೋಟೆಲ್ ಮೈಸೂರು ಪಾಕ್‌ಗೆ ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಬ್ರಾೃಂಡ್ ಪ್ರಚಾರಕ್ಕೆ ಆದ್ಯತೆ ನೀಡುವುದು ಹಾಗೂ ರೇಷ್ಮೆ ಹಾರಕ್ಕೆ ಮಾರುಕಟ್ಟೆ ಸೃಷ್ಟಿಸಲು ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಬಜೆಟ್‌ನಲ್ಲಿ ತಿಳಿಸಿದರು.
ರಾಮನಗರಕ್ಕೆ ಹೊಸ ರೂಪ ಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಒಂದಿಷ್ಟು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಉಳಿದಂತೆ ಎಲ್ಲಾ ವರ್ಗದ ಜನರ, ಅದರಲ್ಲೂ ಪೌರ ಕಾರ್ಮಿಕರ, ಹಿಂದುಳಿದ ವರ್ಗ ಜನರನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸಿದ್ದೇಣೆ. ಇವುಗಳನ್ನು ಕಾಲ ಮಿತಿಯನ್ನು ಜಾರಿಗೆ ತರಲಾಗುವುದು.ಕೆ.ಶೇಷಾದ್ರಿ, ಅಧ್ಯಕ್ಷ ನಗರಸಭೆ ರಾಮನಗರ