

ಬೆಂಗಳೂರು: ಡಿಸ್ಟಿಲರಿ, ಬ್ರಿವರಿ, ವೈನರಿ ಉತ್ಪಾದನಾ ಚುಟುವಟಿಕೆಗಳಿಗೆ ಅಡಚಣೆಯಾಗದಂತೆ ಹೊಸ ಲೇಬಲ್‌ಗೆ ಅನುಮೋದನೆ ನೀಡಲು ಅಬಕಾರಿ ಇಲಾಖೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಟೆಟ್ರಾ, ಸ್ಟ್ಯಾಂಡಿ ಪೌಚ್, ಪಾಲಿ ಪೌಚ್, ಲ್ಯಾಮಿನೇಟೆಡ್ ಪಾಲಿ ಪೌಚ್ ಮತ್ತು ಪಿಲ್ಲೋ ಪೌಚ್ ಸೇರಿ ಮುಂತಾದ ಪ್ಯಾಕೇಜಿಂಗ್ ಮೆಟಿರಿಯಲ್‌ಗಳಲ್ಲಿ ಮದ್ಯ ಬಾಟ್ಲಿಂಗ್ ಮಾಡುವ ಸ್ಥಳೀಯ ಡಿಸ್ಟಿಲರಿ, ಬ್ರಿವರಿ ಮತ್ತು ವೈನರಿ ಘಟಕಗಳಿಗೆ ಕೆಲವೊಂದು ಪರಿಷ್ಕೃತ ಮಾರ್ಗಸೂಚಿ ಪಾಲಿಸಲು ಇಲಾಖೆ ಸೂಚಿಸಿದೆ.
ಸ್ಥಳೀಯ ಮದ್ಯ, ಬಿಯರ್, ಲೋ ಅಲ್ಕೋಹಾಲ್ ಬಿವರೇಜ್, ವೈನ್, ಫ್ರೂಟ್ ವೈನ್ ಬ್ರಾಂಡ್‌ಗಳ ಹೊಸ ಲೇಬಲ್‌ಗಳ ವಾರ್ಷಿಕ ನವೀಕರಣ ಪದ್ಧತಿ ಕೈಬಿಟ್ಟು ಶಾಶ್ವತವಾಗಿ ಲೇಬಲ್‌ಗಳ ಅನುಮೋದನೆ ನೀಡುವ ನಿಯಮ ಜಾರಿಗೆ ತರಲಾಗುತ್ತಿದೆ. ಅದಕ್ಕಾಗಿ ಕರ್ನಾಟಕ ಅಬಕಾರಿ ( ಬಾಟ್ಲಿಂಗ್ ಆಫ್ ಲಿಕ್ಕರ್) ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಹೊರ ದೇಶ ಮತ್ತು ರಾಜ್ಯಗಳಿಂದ ಆಮದಾಗುವ ಲೇಬಲ್‌ಗಳ ಶುಲ್ಕದಲ್ಲಿಯೂ ಬದಲಾವಣೆ ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಲಾಖೆ, ಲೇಬಲ್ ಅನುಮೋದನಾ ಪದ್ಧತಿ ಸಂಬಂಧಿಸ ಕೆಲ ನಿಯಮ ರೂಪಿಸಿದೆ. ಲೇಬಲ್ ಅನುಮೋದನೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಅವಧಿ ಮುಗಿದ ಬಳಿಕ ಅಬಕಾರಿ ಉಪ ಆಯುಕ್ತರು, ಡಿಸ್ಟಿಲರಿ, ಬ್ರಿವರಿ, ವೈನರಿ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇದನ್ನು ಅನುಷ್ಠಾನಕ್ಕೆ ತರಬೇಕೆಂದು ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.