

ಬೆಳ್ತಂಗಡಿ: ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದ ಕರಾವಳಿ ಜಿಲ್ಲೆ ಈಗ ಕೋಮು ಸಂಘರ್ಷದ ಜಿಲ್ಲೆಯಾಗಿ ಕುಖ್ಯಾತಿ ಪಡೆದಿದೆ. ಸ್ವಾರ್ಥಿಗಳ ದ್ವೇಷ ಭಾಷಣದ ಹಿಂದೆ ಬೀಳದೆ ಜಾತಿ ಭೇದವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ವೇದಿಕೆಯನ್ನು ಕಂಡು ಪ್ರೇರಣೆ ಪಡೆಯೋಣ ಎಂದು ಸುನ್ನಿ ಯುವಜನ ಸಂಘದ (ಎಸ್‌ವೈಎಸ್) ಕಾರ್ಕಳ ಜೋನ್ ಕಾರ್ಯದರ್ಶಿ ಮೌಲಾನಾ ಹುಸೈನ್ ಸಅದಿ ಹೊಸ್ಮಾರ್ ಹೇಳಿದರು.
ಗುರುವಾರ ನ್ಯೂ ಇಂಡಿಯಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿವೇತನ, ಅಶಕ್ತರಿಗೆ ನೆರವು, ಆಹಾರ ಮತ್ತು ಔಷಧ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮೋಟಿವೇಷನ್ ಟ್ರೈನರ್ ರಫೀಕ್ ಮಾಸ್ಟರ್, ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಸುಬ್ಬಾಪೂರಮಠ, ಪತ್ರಕರ್ತರಾದ ಅಶ್ರಫ್ ಆಲಿಕುಂಞಿ ಮುಂಡಾಜೆ, ಮನೋಹರ ಬಳಂಜ, ಶರೀಫ್ ಮಲ್ನಾಡ್ ಕಳಸ, ಝುಬೈರ್ ಮಂಗಳೂರು, ಉದ್ಯಮಿ ಹಾಜಿ ಹಸೈನಾರ್ ಶಾಫಿ ಶುಭಹಾರೈಸಿದರು.
ಉದ್ಯಮಿ ನಾಣ್ಯಪ್ಪ ಪೂಜಾರಿ, ಅಬ್ದುಲ್ ಖಾದರ್, ಲೆತೀಫ್ ಉಣ್ಣಾಲು, ಜುನೈದ್ ಅಝ್ಹರಿ ಉಣ್ಣಾಲು, ಇಬ್ರಾಹಿಂ ಮುಸ್ಲಿಯಾರ್, ಆಸಿಫ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ಸಂಸ್ಥಾಪಕ ಮುಹಮ್ಮದ್ ಅಶ್ರಫ್ ಬಜ್ಪೆ ಪ್ರಸ್ತಾಪಿಸಿದರು. ಸಮದ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸೌಲಭ್ಯ ಕೊಡುಗೆ
ಟ್ರಸ್ಟ್‌ನ ಕಚೇರಿ ವ್ಯವಸ್ಥಾಪಕ ಇಸ್ಮಾಯಿಲ್ ಗುರುವಾಯನಕೆರೆ ಅವರನ್ನು ಗೌರವಿಸಲಾಯಿತು. 103 ಮಂದಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನಿಧಿ, 88 ಫಲಾನುಭವಿಗಳಿಗೆ ಆಹಾರದ ಕಿಟ್, 3 ಫಲಾನುಭವಿಗಳಿಗೆ ಔಷಧ ಕಿಟ್ ಹಾಗೂ 80 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಯಿತು.