ಕಸದ ಸಮಸ್ಯೆ ಮುಕ್ತಿಗೆ ಹೊಸ ಉಪಾಯ

Rmgm-Ph-001-Hosa Prayoga Nagarasabe Kasa Story Photo Rangoli - 18-9-2024
Published on

* ರಾಮನಗರದ 31 ವಾರ್ಡ್​ಗಳಲ್ಲಿನ 29 ಸ್ಥಳ ಗುರುತಿಸಿ ಸಿಸಿ ಕ್ಯಾಮರಾ ಅಳವಡಿಕೆ

* ಸ್ವಚ್ಛತೆ ಕಾಪಾಲು ರಂಗೋಲಿ ಬಿಡಿಸಿ, ಗೋಡೆ ಮೇಲೆ ಬರಹ ಬರೆಸುವ ಅಭಿಯಾನ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ವಿಭಿನ್ನ ಆಲೋಚನೆ ಮೂಲಕ ನಗರದ ಸ್ವಚ್ಛತೆಗೆ ಮುಂದಾಗಿರುವ ನಗರಸಭೆ ಕಸ ಹಾಕುವ ಸ್ಥಳದಲ್ಲಿ ರಂಗೋಲಿ ಬಿಟ್ಟು ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಹೊಸ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಾಮನಗರದ ಬೀದಿಗಳಲ್ಲಿ ಎಲ್ಲೆಂದರಲ್ಲಿ ಕಸದ ಗುಡ್ಡೆಗಳು ಬಿದ್ದು, ಸುಂದರ ಪರಿಸರಕ್ಕೆ ಅಡ್ಡಿಯಾಗಿತ್ತು. ನಗರಸಭೆ ಮನೆ ಮನೆಗೆ ಕಸದ ಆಟೋ ಸೇವೆ ನೀಡಿದ್ದರೂ ರಾತ್ರೋರಾತ್ರಿ ಕಸದ ಗುಡ್ಡೆಗಳು ನಿರ್ಮಾಣವಾಗುತ್ತಿದ್ದವು. ಕಸವನ್ನು ಚೆಲ್ಲಾಡುತ್ತಾ ನಾಯಿಗಳು ವಾಸಸ್ಥಾನವಾಗಿ ಮಾಡಿಕೊಳ್ಳುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ಕಿರಿ ಕಿರಿಯಾಗುತ್ತಿತ್ತು.

ನಗರಸಭೆ ಅಧಿಕಾರಿಗಳು ನಗರದಲ್ಲಿ ಕಸ ಇರುವ ಜಾಗ ಗುರುತಿಸಿ, ಆ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಸ್ಥಳಿಯ ಜನರನ್ನು ಒಟ್ಟಿಗೆ ಸೇರಿಸಿ ಕಸ ಹಾಕದಂತೆ ತಿಳಿಸಿ ಅವರಲ್ಲಿ ಸುಂದರ ನಗರದ ಪರಿಕಲ್ಪನೆ, ಸ್ವಚ್ಛ ಪರಿಸರದ ಬಗ್ಗೆ ಮಾಹಿತಿ ನೀಡಿದ್ದಾರೆ. ಬೀದಿ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ನಗರಸಭೆ ಬಿಟ್ಟಿರುವ ಕಸ ಎತ್ತುವ ಆಟೋಗಳ ವಿವರ ನೀಡಿ ಹಸಿ ಕಸ ಒಣಕಸ ವಿಂಗಡಣೆ ಬಗ್ಗೆ ತಿಳಿಸಿ, ಕಸ ಹಾಕುತ್ತಿದ್ದ ಸ್ಥಳದಲ್ಲಿ ರಂಗೋಲಿ ಬಿಡಿಸಿ ಗೋಡೆ ಮೇಲೆ ಬರಹ ಬರೆಸಿ, ಅಭಿಯಾನದ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ವಿಶೇಷ ಪ್ರಯತ್ನ ನಡೆಸಿದ್ದಾರೆ.

29 ಜಾಗ ಗುರುತು

ರಾಮನಗರದ 31 ವಾರ್ಡ್​ಗಳಲ್ಲಿನ 29 ಸ್ಥಳ ಗುರುತಿಸಿ, ಆ ಸ್ಥಳದಲ್ಲಿ ಕಸ ಸ್ವಚ್ಛಗೊಳಿಸಿ ಸ್ಥಳಿಯರನ್ನು ಸೇರಿಸಿ ನಗರಸಭೆಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಜತೆಗೆ ಮನೆ ಮನೆಗೆ ಕಸದ ಆಟೋ ಚಾಲಕ, ಆ ಪ್ರದೇಶದ ಪೌರಕಾರ್ಮಿಕ ಸಿಬ್ಬಂದಿ, ಮೇಸಿ, ಇಂಜಿನಿಯರ್​ ಸೇರಿ ಮತ್ತಿತರ ಅಧಿಕಾರಿಗಳ ಮೊಬೈಲ್​ ನಂಬರ್​ಗಳನ್ನು ಕಾರ್ಡಿನಲ್ಲಿ ಮುದ್ರಿಸಿ ಹಂಚಿ ಕಸದ ಆಟೋಬರುವ ವೇಳೆ ತಿಳಿಸಿ ಮಾಹಿತಿ ನೀಡುತ್ತಿದೆ.

ಸಿಸಿ ಕ್ಯಾಮರಾ

ಸ್ಥಳಿಯ ಜನರಲ್ಲದೆ ಬೇರೆ ಕಡೆಯಿಂದಲೂ ದ್ವಿಚಕ್ರ ವಾಹನಗಳಲ್ಲಿ ಪ್ಲಾಸ್ಟಿಕ್​ ಕವರ್​, ಚೀಲದಲ್ಲಿ ತಂದು ಕಸ ಸುರಿದು ರಾತ್ರೋರಾತ್ರಿ ಹೋಗುತ್ತಿದ್ದರು. ಇಂತಹವರ ಮೇಲೆ ನಿಗಾ ಇಡಲು ಸ್ಥಳದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ನಡೆಸಲು ತಯಾರಿ ನಡೆದಿದೆ. ಸೋಲಾರ್​ ಸಿಸ್ಟಂ ಕ್ಯಾಮರಾ ಅಳವಡಿಕೆಗೆ ನಗರಸಭೆ ಮುಂದಾಗಿದೆ.

ದಂಡ ಪ್ರಯೋಗ

ಕಸ ಹಾಕದಂತೆ ಜಾಗೃತಿ ಜತೆಗೆ ದಂಡ ವಿಧಿಸಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಮೊದಲು ಕಸ ಹಾಕಿದವರಿಗೆ ತಿಳಿವಳಿಕೆ ನೀಡಿ ಅರಿವು ಮೂಡಿಸುವುದು. ನಂತರವೂ ಕಸ ಹಾಕಿದರೆ 500 ರೂ. ನಿಂದ 5 ಸಾವಿರ ರೂ.ವರೆಗೆ ದಂಡ. ಮತ್ತೆ ಯಥಾಸ್ಥಿತಿ ಕಸ ಕಂಡುಬಂದರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಹೆದ್ದಾರಿ ರಸ್ತೆ ಸ್ವಚ್ಛತೆ

ನಗರದ ಸ್ವಚ್ಛತೆ ಜತೆಗೆ ಬೆಂಗಳೂರು&ಮೈಸೂರು ಹೆದ್ದಾರಿಯ 6.5 ಕಿಮೀ ನಗರವ್ಯಾಪ್ತಿ ರಸ್ತೆಯ ಎರಡೂ ಬದಿಗಳಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ 12 ರಿಂದ 13 ಸಿಬ್ಬಂದಿಯ 7 ತಂಡಗಳು ಪ್ರತಿ ಸಿಬ್ಬಂದಿಗೆ 850 ಮೀಟರ್​ನಂತೆ ಕಾರ್ಯಾಚರಣೆ ನಡೆಸಿ ಸ್ವಚ್ಛಗೊಳಿಸಲು ಮುಂದಾಗಿದೆ. ಇದರ ಜತೆಗೆ ಪ್ರತಿ 4ನೇ ಶನಿವಾರ ನಗರದ ಉದ್ಯಾನವನಗಳ ಸ್ವಚ್ಛತೆ ನಿರ್ವಹಣೆಗೂ ನಗರಸಭೆ ಮುಂದಾಗಿದೆ.

ಸ್ವಚ್ಛತೆಗೆ ಆದ್ಯತೆ ನೀಡುವುದು ನಗರಸಭೆ ಕರ್ತವ್ಯ. ಕಸ ಸಂಗ್ರವಾಗುತ್ತಿದ್ದ ನಗರದ 29 ಕಡೆಗಳಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಮೂಲಕ ಅರಿವು ಮೂಡಿಸಲು ರಂಗೋಲಿ ಬಿಡಿಸುವ ಜತೆಗೆ ಶುಚಿತ್ವದ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಸಾರ್ವಜನಿಕರು ನಮ್ಮ ಜತೆ ಕೈ ಜೋಡಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.ಡಾ. ಜಯಣ್ಣ, ಪೌರಾಯುಕ್ತರು, ನಗರಸಭೆ, ರಾಮನಗರ.
ನಗರದಲ್ಲಿ ಕಸದ ರಾಶಿಗೆ ಬರವಿರಲಿಲ್ಲ. ಪ್ರಮುಖ ರಸ್ತೆಗಳು ಸಾರ್ವಜನಿಕರ ರಸ್ತೆ ಸೇರಿ ಎಲ್ಲೆಂದರಲ್ಲಿ ಕಸ ರಾತ್ರೋರಾತ್ರಿ ಹೆಚ್ಚುತ್ತಿತ್ತು. ನಾಯಿಗಳು, ಹಂದಿಗಳು ಕಸದ ಗುಡ್ಡೆಗಳಲ್ಲಿ ಕಾಣುತ್ತಿದ್ದವು. ಪ್ರಸ್ತುತ ನಗರಸಭೆ ಸ್ವಚ್ಛತೆಗೆ ಒತ್ತು ನೀಡಿ ಜನರಲ್ಲಿ ಅರಿವು ಮೂಡಿಸಲು ಮುಂದಾಗಿರುವುದು ಸಂತಸತಂದಿದೆ. ಮುರುಗೇಶ್​, ಬಾಲಗೇರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net