

ಮೈಸೂರು: ನಗರದ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಇತ್ತೀಚೆಗೆ ಹೊಸ ಅತಿಥಿಯೊಬ್ಬರು ಆಗಮಿಸಿದ್ದಾರೆ. ಭರತ್ ಮತ್ತು ಕುಷಿ ಹೆಸರಿನ ಜಿರಾಫೆಗಳಿಗೆ ಮಾ.7ರಂದು ಗಂಡು ಜಿರಾಫೆ ಮರಿಯೊಂದು ಹುಟ್ಟಿದ್ದು ಮೃಗಾಲಯದ ಆಡಳಿತ ವರ್ಗವು ಈ ಸಂತಸವನ್ನು ಹಂಚಿಕೊಂಡಿದೆ.
ತಾಯಿ ಜಿರಾಫೆಯಾಗಿರುವ ಕುಷಿಯು ಲಕ್ನೋ ಮೃಗಾಲಯದ ಅನುಭವ್ ಮತ್ತು ಸುಜಾತ ಜಿರಾಫೆಗಳಿಗೆ ಜನಿಸಿತ್ತು. ಕುಷಿ ಎರಡನೇ ವಯಸ್ಸಿನಲ್ಲಿದ್ದಾಗ ಆಕೆಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ 2007ರ ಅಕ್ಟೋಬರ್ 7ರಂದು ಲಕ್ನೋ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆ ಕರೆತರಲಾಗಿತ್ತು. ಅಂದಿನಿಂದ ಇಂದಿನವರೆಗೆ ಕುಷಿ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದ್ದಾಳೆ. ಅವುಗಳಲ್ಲಿ ಭೀಮ್ ಹೆಸರಿನ ಗಂಡು ಜಿರಾಫೆ ಮರಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ 2012ರ ಏಪ್ರಿಲ್ 14ರಂದು ಪಾಟ್ನಾದ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಕುಷಿ 2009ರಲ್ಲಿ ಲಕ್ಷ್ಮೀ ಹೆಸರಿನ ಹೆಣ್ಣು ಜಿರಾಫೆ, 2012ರಲ್ಲಿ ಭೀಮ್ (ಗಂಡು), 2013ರಲ್ಲಿ ಬಬಿ (ಹೆಣ್ಣು), 2015ರಲ್ಲಿ ಭರತ್ (ಗಂಡು), 2018ರಲ್ಲಿ ತ್ರಿಶಿಕ (ಹೆಣ್ಣು) ಹೆಸರಿನ ಮರಿಗಳಿಗೆ ಜನ್ಮ ನೀಡಿದೆ. ಇದೀಗ ಮತ್ತೊಂದು ಗಂಡು ಮರಿಗೆ ಜನ್ಮ ನೀಡಿರುವುದಾಗಿ ತಿಳಿಸಲಾಗಿದೆ. ತಾಯಿ ಜಿರಾಫೆ ತನ್ನ ಮಗುವಿಗೆ ಹಾಲುಣಿಸಿ ಆರೈಕೆ ಮಾಡುತ್ತಿದೆ.