

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ರಾಜ್ಯದಲ್ಲಿ ಹೊಸದಾಗಿ ಜಾತಿ ಆಧಾರಿತ ಜನ ಗಣತಿಯನ್ನು 90 ದಿನಗಳ ಒಳಗಾಗಿ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈಗಾಗಲೇ ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿದ್ದ ಜಾತಿ ಗಣತಿಯಿಂದ ಕೈ ಸುಟ್ಟುಕೊಂಡಿರುವ ಸರ್ಕಾರಕ್ಕೆ ಹೊಸ ಗಣತಿ ನಡೆಸಲು ಆಡಳಿತಾತ್ಮಕ, ತಾಂತ್ರಿಕ ಮತ್ತು ಕ್ಷೇತ್ರ ಕಾರ್ಯದಲ್ಲಿ ಹತ್ತು ಹಲವು ಸವಾಲು ಎದುರಾಗಲಿವೆ. ಹಾಗಾಗಿ ಹೈಕಮಾಂಡ್ ಕಟ್ಟಾಜ್ಞೆಯಂತೆ 3 ತಿಂಗಳೊಳಗೆ ಜಾತಿ ಆಧಾರಿತ ಜನ ಗಣತಿ ನಡೆಸುವುದು ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ.
ಮೊದಲನೇ ಸವಾಲು ಆಡಳಿತಾತ್ಮಕ ವಿಚಾರ. ಆಯೋಗದ ರಚನೆ ಮತ್ತು ಅಧ್ಯಕ್ಷರ ನೇಮಕವಾಗಬೇಕು. ಅದಕ್ಕೆ ಸದಸ್ಯರನ್ನು ನಿಯೋಜನೆ ಮಾಡಬೇಕು. ಸಂವಿಧಾನದ ಯಾವ ಉಲ್ಲೇಖಿತ ನಿಯಮಾವಳಿಗಳ ಆಧಾರದ ಮೇಲೆ ರಚನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಬೇಕು. ಕಾಂತರಾಜು ಆಯೋಗವನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಎಂದು ಹೇಳಿಕೊಂಡಿದ್ದ ಸರ್ಕಾರ, ವಿರೋಧ ವ್ಯಕ್ತವಾಗುತ್ತಿದಂತೆ ಆರ್ಥಿಕ ಸರ್ವೆ ಎಂಬ ಪದ ಬಳಸಿಕೊಂಡಿತ್ತು. ಇದೀಗ ಇಡೀ ರಾಜ್ಯ ಜಾಗೃತಿ ಹೊಂದಿರುವ ಕಾರಣಕ್ಕೆ ಸಂವಿಧಾನದ ಯಾವ ನಿಯಮಾವಳಿ ಎಂಬುದು ಸ್ಪಷ್ಟಪಡಿಸಿ, ಈ ಹಿಂದೆ ಆಗಿರುವ ತಪು್ಪಗಳು ಮರುಕಳುಹಿಸದಂತೆ ಸಮೀಕ್ಷೆಗೆ ಚಾಲನೆ ನೀಡಬೇಕಿದೆ.
15 ವರ್ಷಗಳ ಹಿಂದೆ ಕಾಂತರಾಜು ಆಯೋಗ ನಡೆಸಿದ್ದ ಜಾತಿ ಗಣತಿ ಎಲ್ಲರ ಮನೆ ತಲುಪಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಬಾರಿಯೂ ಆರೋಪದಿಂದ ಹೊರಬರಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ. ಈಗಾಗಲೇ ಪರಿಶಿಷ್ಟ ಜಾತಿ ಸರ್ವೆ ನಡೆಸುತ್ತಿರುವ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ಆಯೋಗ, ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಸಮೀಕ್ಷೆ ನಡೆಸುತ್ತಿದೆ. ಇದರಲ್ಲಿನ ಲೋಪದೋಷ ಸರಿಪಡಿಸಿಕೊಂಡು ಮತ್ತಷ್ಟು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗಣತಿ ಮಾಡಬೇಕಾಗಿದ್ದು, ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಷನ್ ಸಿದ್ಧವಾಗಬೇಕಾಗಿದೆ. ಅದು ದಿನ ಬೆಳಗಾಗುವುದರೊಳಗೆ ಸಿದ್ಧಪಡಿಸುವಷ್ಟು ಸಲೀಸಲ್ಲ.
ಪ್ರತಿ ಮನೆಯ ವಾರಸುದಾರರಿಂದ ಮಾಹಿತಿ ಕಲೆ ಹಾಕಿರುವುದಕ್ಕೆ ಸಾಕ್ಷ್ಯ ಸಂಗ್ರಹವೂ ಮುಖ್ಯವಾಗಲಿದೆ. ಅದಕ್ಕಾಗಿ ಆಧಾರ್, ಪಡಿತರ, ಮೊಬೈಲ್ ನಂಬರ್ ಪಡೆದು ಕೆವೈಸಿ, ಒಟಿಪಿ ಅಥವಾ ಡಿಜಿಟಲ್ ಸಹಿ, ಬೆರಳಚ್ಚು ಪಡೆಯುವ ಅಗತ್ಯವೂ ಇರಲಿದೆ. ಹೊರರಾಜ್ಯ-ವಿದೇಶದಲ್ಲಿ ಇರುವ ಕನ್ನಡಿಗರಿಗೂ ಸರ್ವೆಯಲ್ಲಿ ಭಾಗವಹಿಸುವಂತಹ ಸಾಫ್ಟ್ ವೇರ್ ಅಭಿವೃದ್ಧಿಪಡಿಸಬೇಕು. ಅಂದಹಾಗೆ ಆಯೋಗಕ್ಕೆ ಹೊಸ ನೇಮಕ ಆದ ಬಳಿಕ ಈ ಕಾರ್ಯಕ್ಕೆ ಚಾಲನೆ ಸಿಗಲಿದೆ. ಸರ್ಕಾರ ಮೊದಲು ಆಯೋಗದ ರಚನೆಯಿಂದಲೇ ಚುರುಕು ಮುಟ್ಟಿಸಬೇಕಾಗಿದೆ.
ರಾಜ್ಯದಲ್ಲಿ ಶಾಲೆಗಳು ಶುರುವಾಗಿ 2 ವಾರ ಕಳೆದಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಯತ್ತ ಮುಖ ಮಾಡಿದ್ದಾರೆ. ಒಳಮೀಸಲಾತಿ ಸರ್ವೆ ಮುಗಿಸಿ ಶಾಲೆಗೆ ಬಂದಿರುವ ಶಿಕ್ಷಕರು, ಪಾಠ-ಪ್ರವಚನ ಆರಂಭ ಮಾಡಬೇಕಿದೆ. ಮತ್ತೆ ಗಣತಿಗೆ ಎಳೆದರೆ ಶೈಕ್ಷಣಿಕ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರಲಿದೆ. ಉತ್ತಮ ಮುಂಗಾರು ಮಳೆ ಆಗುತ್ತಿದ್ದು, ರೈತರು ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಗಣತಿಗೆ ಮನೆ ಬಾಗಿಲಿಗೆ ಶಿಕ್ಷಕರು ಹೋದಾಗ ಸಿಗುವುದೇ ಕಷ್ಟವಾಗಿದೆ. ಮತ್ತೆ ಕೂತಲ್ಲಿಯೇ ಅರ್ಜಿ ಭರ್ತಿ ಮಾಡುವ ಪರಿಪಾಟಲಿಗೆ ಸಿಲುಕುವ ಸಾಧ್ಯತೆ ಹೆಚ್ಚಿವೆ.
| ಶಿವಾನಂದ ತಗಡೂರು ಬೆಂಗಳೂರು
ಜಾತಿ ಗಣತಿ ವರದಿಯನ್ನು ತಡೆದು ನಿಲ್ಲಿಸಿ, ಮರು ಸಮೀಕ್ಷೆಗೆ ಘೋಷಣೆ ಮಾಡಿಸುವಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿನ ಸಚಿವರು ಯಶಸ್ವಿಯಾಗಿದ್ದಾರೆ. ಆ ಮೂಲಕ ಸಾರ್ವಜನಿಕವಾಗಿ ಎದುರಾಗಿದ್ದ ಅಡ್ಡಿ, ಆತಂಕ ಮತ್ತು ಒತ್ತಡಗಳಿಗೆ ಕೈ ಹೈಕಮಾಂಡ್ ಮಣಿದಿದೆ. ಸಂಘರ್ಷದ ಹಂತ ತಲುಪಿದ್ದ ಜಾತಿ ಗಣತಿ ವರದಿ ಮರು ಸಮೀಕ್ಷೆಗೆ ಹೈಕಮಾಂಡ್ ಅಸ್ತು ಎಂದಿರುವುದರಿಂದ ಸರ್ಕಾರಕ್ಕೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಜಾತಿ ಗಣತಿ ವರದಿ ಜಾರಿ ಮಾಡದಂತೆ ಸರ್ಕಾರದ ಭಾಗವೇ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವರ ತಂಡ ಈ ನಿಟ್ಟಿನಲ್ಲಿ ಒತ್ತಡ ತಂತ್ರ ಅನುಸರಿಸುತ್ತಲೇ ಇತ್ತು. ಈ ಅಡ್ಡಿಗಳನ್ನು ದಾಟಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದರು. ಆದರೆ, ಅದನ್ನು ಜಾರಿಗೆ ನೀಡಲು ಸಾಧ್ಯವಾಗಲೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮದೇ ಪಕ್ಷದೊಳಗಿನ ಪ್ರತಿರೋಧದ ಸುಳಿಯಲ್ಲಿ ಅವರು ಸಿಲುಕಿಕೊಂಡಿದ್ದರು.
ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತ ಸಮುದಾಯದವರು ವರದಿ ಜಾರಿಗೆ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದರೆ, ಸ್ವತಂ ಸಿಎಂ ಕೂಡ ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ವರದಿ ಜಾರಿಗೆ ಮುಂದಾಗಿದ್ದರು. ಇದಕ್ಕೆ ಸೆಡ್ಡು ಹೊಡೆದಿದ್ದ ಒಕ್ಕಲಿಗರು, ಲಿಂಗಾಯತ ಸಮುದಾಯ ಡಿಕೆಶಿ ನೇತೃತ್ವದಲ್ಲಿ ಸಚಿವರನ್ನೇ ಮುಂದಿಟ್ಟುಕೊಂಡು ಸಮರ ಸಾರಿತ್ತು. ಈ ವಿಷಯ ಆಂತರಿಕ ಸಂಘರ್ಷಕ್ಕೂ ಕಾರಣವಾಗಿತ್ತು. ಇದಕ್ಕಾಗಿಯೇ ಹಲವು ಸಚಿವ ಸಂಪುಟ ಸಭೆಗಳು ನಡೆದರೂ ಎಲ್ಲರನ್ನೂ ಸಹಮತಕ್ಕೆ ತರಲು ಸಿದ್ದರಾಮಯ್ಯಗೆ ಸಾಧ್ಯವಾಗಲೇ ಇಲ್ಲ.
ಪ್ರಮುಖ ಮಠಗಳು ಸೇರಿ ಎಲ್ಲರ ವಿರೋಧಗಳನ್ನು ಮೆಟ್ಟಿ ನಿಂತು ಒಂದು ಹಂತದಲ್ಲಿ ವರದಿ ಜಾರಿಗೆ ಸಿಎಂ ಮುಂದಾಗಿದ್ದರು. ಸಮಾಧಾನದಿಂದ ಹೆಜ್ಜೆ ಇಡುವಂತೆ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದ ಸರ್ಕಾರ, ಈಗ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ, ಈ ಸವಾಲನ್ನು ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸಲಿದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ ಜಾತಿ ಜನಗಣತಿಯನ್ನು ಪ್ರಸ್ತಾಪಿಸುತ್ತದೆ. ಅದು ಸಾಮಾಜಿಕ ಕಾಳಜಿಯಿಂದಲ್ಲ, ಬದಲಾಗಿ ನಾಡಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸದಾ ಸಂಚು ರೂಪಿಸುತ್ತಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಕಿದ್ದಾರೆ. ಕಾಲ್ತುಳಿತದ 11 ಅಮಾಯಕರ ಸಾವುಗಳಿಗೆ ರಾಜ್ಯವಷ್ಟೇ ಅಲ್ಲ ದೇಶವೇ ಮಮ್ಮಲ ಮರುಗುತ್ತಿದೆ. ಆದರೆ ಪ್ರಚಾರದ ಗೀಳಿಗೆ ಇಳಿದು ದೇಶದ ಜನಸಾಮಾನ್ಯರ ಆಕ್ರೋಶ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಜನಗಣತಿಯನ್ನು ಪುನಃ ಪ್ರಸ್ತಾಪಿಸುವ ಮೂಲಕ ತನ್ನ ಹುಳುಕು ಮುಚ್ಚಿಕೊಳ್ಳಲು ಹೊರಟಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದಿದ್ದಾರೆ. ಮರು ಜಾತಿಗಣತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಈಗಾಗಲೇ ಖರ್ಚು ಮಾಡಿರುವ 160 ಕೋಟಿ ರೂ.ಗೂ ಹೆಚ್ಚು ಹಣ ಸಂಪೂರ್ಣ ವ್ಯರ್ಥ ಎಂದು ಒಪ್ಪಿಕೊಳ್ಳುತ್ತಿದ್ದಾರೆಯೇ? ಉಪಮುಖ್ಯಮಂತ್ರಿಗಳ ಹೇಳಿಕೆಯಿಂದ ಈ ಸಂಗತಿ ಬಹಿರಂಗವಾದಂತಿದೆ. ಕಾಂಗ್ರೆಸ್ ಸರ್ಕಾರದ ಈ ಕುಟಿಲ ಬುದ್ದಿ, ಬೇಜವಾಬ್ದಾರಿತನ ಹಾಗೂ ಜನ ಪೀಡಕ ನಿಲುವುಗಳಿಗೆ ಜನರು ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.
ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಹಿನ್ನಲೆಯಲ್ಲಿ ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ನಿರ್ಧಾರ ಕೖಗೊಂಡಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ವಿವಿಧ ಜಾತಿಗಳ ಸಂಘ ಸಂಸ್ಥೆಗಳು, ಮಠಾಧೀಶರು, ಸಮುದಾಯಗಳ ಮುಖಂಡರು, ಸಚಿವರು ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ರ್ಚಚಿಸಲಾಗಿದೆ. ಜಾತಿಗಣತಿ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವುದು ಹಾಗೂ ಜಾತಿ ಗಣತಿಯ ದತ್ತಾಂಶ ಹತ್ತು ವರ್ಷಗಳಷ್ಟು ಹಳೆಯದಾಗಿರುವುದರಿಂದ ಮರುಗಣತಿ ಮಾಡಲು ತೀರ್ವನಿಸಲಾಗಿದೆ. ಈಗಾಗಲೇ ಪರಿಶಿಷ್ಟ ಜಾತಿಗಳ ಜನಗಣತಿ ನಡೆದಂತೆ, ಇತರ ಜಾತಿಗಳ ಗಣತಿಯನ್ನು ಹೊಸದಾಗಿ ಕೖಗೊಳ್ಳಲು ನಿರ್ಧರಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು 90 ದಿನದೊಳಗೆ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಸಮುದಾಯಗಳಿಗೆ ಅಂಕಿ ಅಂಶಗಳ ಬಗ್ಗೆ ಇರುವ ಗೊಂದಲ ನಿವಾರಣೆಗೆ ತೀರ್ವನಿಸಲಾಗಿದೆ, ಮನೆ ಮನೆ ಸಮೀಕ್ಷೆ, ಆನ್ಲೈನ್ ಮೂಲಕ ಎಲ್ಲರೂ ತಮ್ಮ ಮಾಹಿತಿ ಮತ್ತೊಮ್ಮೆ ಸಲ್ಲಿಸಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಜಾತಿ ಗಣತಿ ವಿಚಾರವಾಗಿ 12ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಿದ್ದೇವೆ. ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕು ಎಂದು ವರಿಷ್ಠರು ನಮಗೆ ಮಾರ್ಗ ದರ್ಶನ ನೀಡಿದ್ದಾರೆ. ಈ ಜಾತಿ ಗಣತಿಯಲ್ಲಿ ಯಾರನ್ನೂ ಬಿಡಬಾರದು, ಎಲ್ಲರನ್ನೂ ಒಳಗೊಳ್ಳಬೇಕು ಎಂದು ತೀರ್ವನನಿಸಲಾಗಿದೆ. ಯಾರ ಅಪಸ್ವರವೂ ಇಲ್ಲದಂತೆ ನೋಡಿಕೊಳ್ಳಲು ಸಿಎಂಗೆ ನಿರ್ದೇಶನ ನೀಡಿದ್ದಾರೆಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ (ಮರು ಸಮೀಕ್ಷೆ) ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ವಾಗತಿಸಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು (ಜಾತಿಗಣತಿ) ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ ಎಂದು ಆಧಾರಗಳ ಸಹಿತ ಮಹಾಸಭಾ ಪ್ರಾರಂಭದಿಂದಲೂ ಪ್ರತಿಭಟಿಸುತ್ತಲೇ ಬಂದಿದೆ. ಜಾತಿಗಣತಿಗೆ ನಮ್ಮ ವಿರೋಧವಿಲ್ಲ. ಆದರೆ ವೈಜ್ಞಾನಿಕವಾಗಿ, ಸಮಗ್ರವಾಗಿ, ಆಧಾರ್ ಜೋಡಣೆ, ಎಐ ತಂತ್ರಜ್ಞಾನ ಸೇರಿ ಅತ್ಯಾಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮರು ಸಮೀಕ್ಷೆ (ಜಾತಿಗಣತಿ) ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ ಎಂದು ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಮಹಾಸಭಾ ನಿರಂತರ ಹೋರಾಟದ ಫಲವಾಗಿ ಇಂದು ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ, ಪಕ್ಷದ ಇನ್ನಿತರ ನಾಯಕರು ರಾಜ್ಯದಲ್ಲಿ ಮರು ಸಮೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.