

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಕಲಬುರಗಿ ವಿಭಾಗ-೨ ರಿಂದ ಸಾರ್ವಜನಿಕರ ಬೇಡಿಕೆಯಂತೆ ಕಲಬುರಗಿಯಿಂದ ಮೈಸೂರಿಗೆ ಸಂಚರಿಸುವ ಹೊಸ ಬಸ್ ಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಬಸ್ಸು -ಶಹಾಪೂರ, ಲಿಂಗಸೂರ, ಹೊಸಪೇಟ್, ಚಿತ್ರದುರ್ಗ, ಹಿರಿಯೂರ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿಗೆ ತಲುಪುತ್ತದೆ. ಕಲಬುರಗಿಯಿಂದ ಮೈಸೂರಿಗೆ ಸಂಚರಿಸುವ ಈ ಬಸ್ಸು ಕಲಬುರಗಿಯಿಂದ ಮಧ್ಯಾಹ್ನ ೧೨ ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ ೫.೩೦ ಗಂಟೆಗೆ ಮೈಸೂರಿಗೆ ತಲುಪಲಿದೆ. ಮರಳಿ ಈ ಬಸ್ಸು ಮೈಸೂರಿನಿಂದ ಮಧ್ಯಾಹ್ನ ೨ ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ ೧೦ ಗಂಟೆಗೆ ಕಲಬುರಗಿಗೆ ತಲುಪಲಿದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ವಿಭಾಗ-೨ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ, ವಿಭಾಗೀಯ ತಾಂತ್ರಿಕ ಶಿಲ್ಪಿ ಶೇಖ್ ಹುಸೇನ್, ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರ ಡಿಗ್ಗಿ, ಕಲಬುರಗಿ ಬಸ್ ಘಟಕ-೨ರ ವ್ಯವಸ್ಥಾಪಕ ಕೃಷ್ಣಾ ಪವಾರ, ಘಟಕ-೩ರ ವ್ಯವಸ್ಥಾಪಕ ರವೀಂದ್ರ ಹಾಗೂ ಬಸ್ ನಿಲ್ದಾಣ ಅಧಿಕಾರಿ ಅನೀಲ ಭೀಮನಗರ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.