

ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮತ್ತು ಮನೆಯವರಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವರಿಗೆ ಸಮರ್ಪಣೆಯಾಗಲಿರುವ ನೂತನ ಬ್ರಹ್ಮರಥ ಉಡುಪಿಯ ಕೋಟೇಶ್ವರದಿಂದ ಹೊರಟು ಬುಧವಾರ ನಗರ ತಲುಪಿದಾಗ ಭಗವದ್ಭಕ್ತರು ಭಕ್ತಿ ಭಾವದಿಂದ ಬರಮಾಡಿಕೊಂಡರು.
ಆರಂಭದಲ್ಲಿ ತಾಲೂಕಿನ ಕನಕಮಜಲಿಗೆ ಆಗಮಿಸುವ ಮೂಲಕ ಸುಳ್ಯ ತಾಲೂಕಿಗೆ ಪುರಪ್ರವೇಶ ಮಾಡಿತು.
ಕನಕಮಜಲಿನ ಶ್ರೀ ಆತ್ಮಾರಾಮ ದೇವರಿಗೆ ವಿಶೇಷ ಮಂಗಳಾರತಿ ನೆರವೇರಿಸಿ, ನೂತನ ಬ್ರಹ್ಮರಥಕ್ಕೆ ಆರತಿ ಬೆಳಗುವ ಮೂಲಕ ಬ್ರಹ್ಮರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ನೂತನ ಬ್ರಹ್ಮರಥಕ್ಕೆ ಕನಕಮಜಲು ಗ್ರಾಪಂ ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಮಂದಿರದ ಅರ್ಚಕ ಗೋಪಾಲಕೃಷ್ಣ ಭಟ್ ವಾರಂಬಳಿತ್ತಾಯ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಭಕ್ತರು ಬ್ರಹ್ಮರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕನಕಮಜಲಿನಿಂದ ಸುಳ್ಯ ಜಾಲ್ಸೂರು, ಪೈಚಾರು, ಹಳೆಗೇಟು, ಜ್ಯೋತಿ ಸರ್ಕಲ್, ಶ್ರೀರಾಮ ಭಜನಾ ಮಂದಿರ ತಲುಪಿದಾಗಲೂ ಬ್ರಹ್ಮ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು. ಅಲ್ಲಲ್ಲಿ ಪುಷ್ಪಾರ್ಚನೆ, ಪೂಜೆ ನಡೆಸಿ ರಥವನ್ನು ಇದಿರುಗೊಳ್ಳಲಾಯಿತು. ಮೆರವಣಿಗೆಯುದ್ದಕ್ಕೂ ಚೆಂಡೆ, ನಾಸಿಕ್ ಬ್ಯಾಂಡ್, ಭಜನಾ ತಂಡಗಳು ಹಾಗೂ ವಿವಿಧ ಕಲಾಕೃತಿಗಳು ನೋಡುಗರ ಕಣ್ಮನ ತಣಿಸಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾರ್ಯದರ್ಶಿಗಳಾದ ಡಾ.ಐಶ್ವರ್ಯ, ಕೆ.ವಿ.ಹೇಮನಾಥ, ಬ್ರಹ್ಮರಥ ಸಮರ್ಪಣಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಯ, ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ ಡಿ.ವಿ ಮೊದಲಾದವರಿದ್ದರು.