ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ ಅನುಷ್ಟಾನಕ್ಕೆ ಸರ್ಕಾರ ಅನುಮೋದನೆ

Arogya soudha
Published on

ಬೆಂಗಳೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗುವ ನವಜಾತ ಶಿಶುಗಳ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ಅನುಷ್ಠಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂಜರ ಜಿಲ್ಲೆಗಳಲ್ಲಿ ಆರಂಭಿಸಲು ಸೂಚಿಸಲಾಗಿದೆ.

ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆರಿಗೆಯಾಗುವ ಎಲ್ಲಾ ನವಜಾತ ಶಿಶುಗಳ ಜನ್ಮಜಾತ ಹೈಪೋ ಥೈರಾಯ್ಡಸಮ್, ಜನ್ಮಜಾತ ಆಡ್ರಿನಲ್ ಹೈಪರ್ಪ್ಲಾಸಿಯಾ (ಸಿಎಎಚ್), ಗ್ಯಾಲಕ್ಟೋಸೀಮಿಯಾ, ಫಿನೈಲ್ಕೆಟೋನೂರಿಯಾ ಮತ್ತು ಗ್ಲೂಕೋಸ್-6 ಫಾಸ್ಪೇಟ್ ಡಿಹೈಡ್ರೋಜನೇಸ್ (ಜಿ6ಪಿಡಿ) ಕೊರತೆ ಸೇರಿ 5 ಜನ್ಮಜಾತ ಮತ್ತು ಚಯಾಪಚಯ ಅಸ್ವಸ್ಥೆಗಳಿಗಾಗಿ ಸಾರ್ವತ್ರಿಕ ತಪಾಸಣೆಗೆ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ಅನುಷ್ಠಾನ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಾಯೋಗಕವಾಗಿ ಬೆಂ. ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 57,350 ನವಜಾತ ಶಿಶುಗಳ ತಪಾಸಣೆಗೆ 2.58 ಕೋಟಿ ರೂ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುದಾನ ಬಿಡುಗಡೆ ಮಾಡಲು ಹಾಗೂ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ವ್ಯಾಪ್ತಿಗೆ ಒಳಪಡುವ ತುಮಕೂರು, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳ ತಾಲೂಕುಗಳಲ್ಲಿ, ಕೆಎಂಇಆರ್‌ಸಿ ಅಡಿಯಲ್ಲಿ 2.79 ಕೋಟಿ ರೂ. ಅನುದಾನ ಒದಗಿಸುವಂತೆ ಸೂಚಿಸಿದೆ.

ನವಜಾತ ಶಿಶುಗಳ ತಪಾಸಣೆಯ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಗುಣಮಟ್ಟಕ್ಕಾಗಿ ಪರಿಣಾಮಕಾರಿ ಕಾರ್ಯವಿಧಾನಗಳನ್ನು ಅನುಸರಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ರಾಜ್ಯ ನವಜಾತ ಶಿಶು ಪರೀಕ್ಷಾ ಕೇಂದ್ರ (ಎಸ್‌ಎನ್‌ಎಸ್‌ಸಿ) ಸ್ಥಾಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net