

ದಕ್ಷಿಣ ಕನ್ನಡ: ಕರೊನಾ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿರುವ ಪರಿಣಾಮ ಶಾಲೆಗಳ ಆರಂಭಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಮಕ್ಕಳ ಕಲಿಕೆ ನಿರಂತರವಾಗಿ ಇರಬೇಕು ಎಂಬ ಸದುದ್ದೇಶದಿಂದ ಸರ್ಕಾರ ಜಾರಿ ಮಾಡಿದ್ದ ವಿದ್ಯಾಗಮ ಯೋಜನೆಗೂ ಸದ್ಯ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಲ್ಲದೆ ಆನ್ಲೈನ್ ತರಗತಿಯೂ ಗ್ರಾಮೀಣ ಭಾಗದ ಮಕ್ಕಳ ಪಾಲಿಗೆ ಸರ್ಕಸ್ನಂತಾಗಿದ್ದು, ಮೊಬೈಲ್ ಹಿಡಿದು ಮರವೇರುತ್ತಿದ್ದಾರೆ!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಕೇಂದ್ರದ ಕಟ್ಟ ಕಡೆಯ ಗ್ರಾಮ ಬಾಳುಗೋಡುನಲ್ಲಿ ಆನ್ಲೈನ್ ತರಗತಿಗಳಿಗೆ ಹಾಜರಾಗುವುದೇ ಸವಾಲಿನ ಕೆಲಸ. ಈ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಅರಣ್ಯ ಭಾಗದ ಗುಡ್ಡಗಳಿಗೆ ತೆರಳಿ ಮರ ಹತ್ತಿ ನೆಟ್‍ವರ್ಕ್‍ಗಾಗಿ ಹರಸಾಹಸ ಪಡುತ್ತಿದ್ದಾರೆ.
ಇನ್ನು ಬಾಳುಗೋಡು ಪ್ರದೇಶದಲ್ಲಿ ಯಾವುದೇ ಸಿಮ್‍ನ ನೆಟ್‍ವರ್ಕ್ ಸಿಗಲ್ಲ. ಹಾಗಾಗಿ ಇಲ್ಲಿನ ಜನರು ಸಂಪರ್ಕ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ. ಮಕ್ಕಳಂತೂ ಅಪಾಯಕಾರಿಯಾಗಿ ಮರ ಹತ್ತಿ ಶಿಕ್ಷಣ ಪಡುಯುತ್ತಿದ್ದಾರೆ.
ಮಲೆನಾಡು, ಕುಗ್ರಾಮದ ಬಹುತೇಕ ಮಕ್ಕಳು ಮೊಬೈಲ್ ನೆಟ್‍ವರ್ಕ್ ಸಿಕ್ತಿಲ್ಲವೆಂದು ಗುಡ್ಡ, ದಿಣ್ಣೆ, ಮನೆ ಛಾವಣಿ ಮೇಲೇರುತ್ತಿದ್ದಾರೆ ಎಂಬುದು ಗೊತ್ತಿರುವ ವಿಷಯ. ನೆಟ್‍ವರ್ಕ್ ಇಲ್ಲದೆ ಆನ್ಲೈನ್ ಪಾಠ ಕೇಳಲು ಕಿರಿಕಿರಿ ಅನುಭವಿಸುತ್ತಿರುವವರ ಪಟ್ಟಿಯಲ್ಲಿ ಬಾಳುಗೋಡು ಗ್ರಾಮದ ಮಕ್ಕಳೂ ಹೊರತಾಗಿಲ್ಲ. ಅಪಾಯ ಸಂಭವಿಸುವ ಮುನ್ನ ಇದಕ್ಕೊಂದು ಸೂಕ್ತ ಪರಿಹಾರ ಕಲ್ಪಿಸುವತ್ತ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ.