More

    ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಪದೇಪದೆ ಈ ಗುಲಾಬಿಯೇ ಅಧ್ಯಕ್ಷೆ!

    | ರವಿ ಬಿದನೂರು, ಹೊಸನಗರ
    ಅದೃಷ್ಟ ಎಂದರೆ ಇದೇ ಇರಬೇಕು. ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಪಟ್ಟಣ ಪಂಚಾಯಿತಿಗೆ ಈ ಮಹಿಳೆ ಅಧ್ಯಕ್ಷೆಯಾಗಿದ್ದರು, ನಂತರ ಉಪಾಧ್ಯಕ್ಷರಾದರು. ಮತ್ತೆ ಅದೇ ಕತೆ. ಈಗಲೂ ಪಕ್ಷಕ್ಕೆ ಬಹುಮತ ಇಲ್ಲ. ಆದರೂ ಇವರಿಗೆ ಇನ್ನೊಮ್ಮೆ ಅಧ್ಯಕ್ಷೆಯಾಗುವ ಯೋಗ ಕೂಡಿ ಬಂದಿದೆ. ಆ ಮೂಲಕ ಅದೃಷ್ಟ ಲಕ್ಷ್ಮೀ ಎನಿಸಿಕೊಂಡಿದ್ದಾರೆ.

    ಈ ಅದೃಷ್ಟವಂತೆ ಹೊಸನಗರ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯೆ ಗುಲಾಬಿ ಮರಿಯಪ್ಪ. 11ನೇ ವಾರ್ಡ್‌ನಿಂದ ಗೆದ್ದಿರುವ ಗುಲಾಬಿಗೆ ಪಟ್ಟಣದ ಅಧಿಪತಿಯಾಗುವ ಅವಕಾಶ ಸಿಕ್ಕಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. 11 ಸದಸ್ಯ ಬಲದ ಪಪಂನಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟ (ಚುನಾವಣಾಪೂರ್ವ ಹೊಂದಾಣಿಕೆ) ಸ್ಪಷ್ಟ ಬಹುಮತ ಪಡೆದಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪರಿಶಿಷ್ಟ ಜಾತಿಯ ಸದಸ್ಯೆ ಎರಡೂ ಪಕ್ಷಗಳಲ್ಲಿ ಇಲ್ಲ. ನಾಲ್ಕು ಸ್ಥಾನ ಗಳಿಸಿರುವ ಬಿಜೆಪಿಯಲ್ಲಿ ಈ ಅರ್ಹತೆ ಹೊಂದಿದ ಏಕೈಕ ಸದಸ್ಯೆ ಎಂದರೆ ಗುಲಾಬಿ.

    2007-08ರಲ್ಲಿ ಮೊದಲ ಬಾರಿ 10ನೇ ವಾರ್ಡ್‌ನಿಂದ ಗೆದ್ದು ಬಂದ ಗುಲಾಬಿ ಮರಿಯಪ್ಪಗೆ ಮೀಸಲಾತಿಯನ್ವಯ ಅಧ್ಯಕ್ಷ ಸ್ಥಾನ ಒಲಿದಿತ್ತು. ಆಗ ಬಿಜೆಪಿಯಿಂದ ಗೆದ್ದವರ ಸಂಖ್ಯೆ ಕೇವಲ ಎರಡು. ಇವರೊಂದಿಗೆ ಎ.ವಿ.ಮಲ್ಲಿಕಾರ್ಜುನ್ ಗೆದ್ದು ಬಂದು ಸಾಥ್ ನೀಡಿದ್ದರು. ಅಂದು 11 ಸದಸ್ಯರ ಬಲಾಬಲದಲ್ಲಿ ಜೆಡಿಎಸ್ 6, ಕಾಂಗ್ರೆಸ್ 3, ಬಿಜೆಪಿ 2 ಸದಸ್ಯರನ್ನು ಹೊಂದಿತ್ತು. ಆದರೂ ಮೀಸಲಾತಿ ಬಿಜೆಪಿಗೆ ವರವಾಗಿತ್ತು.

    ಮತ್ತೆ ಎರಡೂವರೆ ವರ್ಷದ ನಂತರ ಮೀಸಲಾತಿ ಬದಲಾವಣೆಯಾದಾಗ ಗುಲಾಬಿ ಮರಿಯಪ್ಪ ಅವರ ಲಕ್ ಕುದುರಿತು. 2ನೇ ಅವಧಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ಬಂದ ಕಾರಣ ಅವರೇ ಉಪಾಧ್ಯಕ್ಷರಾಗಿ ಕಾರ್ಯಭಾರ ನಡೆಸಿದರು. ಗೆದ್ದ ಮೊದಲ ಅವಧಿಯಲ್ಲೇ ಬಹುಮತ ಇಲ್ಲದಿದ್ದರೂ ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಇದೀಗ ಮತ್ತೊಮ್ಮೆ ಅಧ್ಯಕ್ಷೆ ಸ್ಥಾನ ಒಲಿದು ಬಂದಿದೆ.

    ಬಹುಮತ ಇಲ್ಲದಿದ್ದರೂ ಅಧಿಕಾರ: ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 4, ಕಾಂಗ್ರೆಸ್ 4 ಮತ್ತು ಜೆಡಿಎಸ್ 3 ಸದಸ್ಯರನ್ನು ಹೊಂದಿದೆ. ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ 7 ಸ್ಥಾನ ಬಾಚಿಕೊಳ್ಳುವ ಮೂಲಕ ಜಯಭೇರಿ ಬಾರಿಸಿವೆ. ಚುನಾವಣೆಯಲ್ಲಿ ಕೇವಲ 4 ಸ್ಥಾನ ಪಡೆದ ಬಿಜೆಪಿ ಮುಖಭಂಗಕ್ಕೆ ಒಳಗಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಘೋಷಣೆಯಾದ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಮುಖಂಡರಿಗೀಗ ದಿಕ್ಕು ತೋಚದಾಗಿದೆ. ಒಟ್ಟು 11 ಸದಸ್ಯರ ಪೈಕಿ 6 ಮಂದಿ ಮಹಿಳೆಯರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪಂಚಾಯಿತಿಯೀಗ ಮಹಿಳೆಯರ ದರ್ಬಾರ್‌ಗೆ ಸಾಕ್ಷಿಯಾಗಲಿದೆ.

    ಉಡುಪಿಯಿಂದ ಹೊಸನಗರ: ಉಡುಪಿಯ ಕುಂಜಬೆಟ್ಟು ನಿವಾಸಿ ಗುಲಾಬಿ ಅವರು ಕಾರಣಗಿರಿಯ ಆರ್.ಎಂ ಮರಿಯಪ್ಪ ಜತೆ ಮದುವೆಯಾಗಿ ಹೊಸನಗರಕ್ಕೆ ಬಂದರು. 7ನೇ ತರಗತಿ ಓದಿರುವ ಗುಲಾಬಿಗೆ ರಾಜಕಾರಣ ಪ್ರವೇಶ ಅನಿರೀಕ್ಷಿತ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

    ಈ ಬಾರಿ ಚುನಾವಣೆಗೆ ನಿಲ್ಲುವ ಯೋಚನೆ ಇರಲಿಲ್ಲ. ಒತ್ತಾಯಕ್ಕೆ ಮಣಿದು ನಿಂತು ಗೆದ್ದಿದ್ದೇನೆ. ಮತ್ತೊಮ್ಮೆ ಅಧ್ಯಕ್ಷೆಯಾಗುವ ಅವಕಾಶ ಸಿಕ್ಕಿದೆ. ಈ ಬಾರಿ ಹಿಂದಿನಷ್ಟು ಸವಾಲಿಲ್ಲ. ಬಿಜೆಪಿಯಲ್ಲಿ ನಾಲ್ವರು ಸದಸ್ಯರಿದ್ದು ಮತ್ತು ಎಲ್ಲ ಪಕ್ಷದ ಸದಸ್ಯರ ಸಹಕಾರ ಪಡೆದು ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುವೆ ಎಂದು ಗುಲಾಬಿ ಮರಿಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕೋರ್ಟ್​ ಮೇಟ್ಟಿಲೇರುವ ಸಾಧ್ಯತೆ: ಪಪಂಗೆ ಚುನಾವಣೆಗೆ ಮುನ್ನವೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟವಾಗಿತ್ತು. ಆದರೀಗ ಬದಲಾವಣೆಯಾಗಿದೆ. ಬಹುಮತ ಇಲ್ಲದಿದ್ದರೂ ಬಿಜೆಪಿ ಅಧಿಕಾರ ಪಡೆದುಕೊಂಡಿದೆ. ಸದಸ್ಯರ ಬಹುಮತವಿದ್ದಾಗ ಮಾತ್ರ ಸಮರ್ಥ ಆಡಳಿತ ಸಾಧ್ಯ. ಈಗ ಮೀಸಲಾತಿ ಬದಲಾವಣೆ ಮಾಡಿದ್ದು ಚುನಾವಣಾ ಪೂರ್ವದಲ್ಲೇ ತಿದ್ದುಪಡಿ ತಂದು ಮೀಸಲಾತಿ ಪ್ರಕಟ ಮಾಡುವ ಔಚಿತ್ಯ ಏನಿತ್ತು? ಎಂದು ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಪ್ರಶ್ನಿಸಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವುದು ಬಹುಮತ ಪಡೆದ ಮೈತ್ರಿ ಕೂಟದ ಆಕ್ರೋಶಕ್ಕೆ ಕಾರಣವಾಗಿದ್ದು, ಕೋರ್ಟ್ ಮೆಟ್ಟಿಲೇರುವ ಚರ್ಚೆಗಳು ನಡೆಯುತ್ತಿವೆ.

    ನವೆಂಬರ್ ಅಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ? ಇಲ್ಲಿದೆ ಸರ್ಕಾರದ ನಿಲುವು

    ಜೆಡಿಎಸ್ ಬಿಡುವವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನ!

    ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ತಲೆ-ದೇಹ ಇಬ್ಭಾಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts