ಶುದ್ಧವಾಗಿಲ್ಲ ನೇತ್ರಾವತಿ ಒಡಲು!

Btw_Nethravathi
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಜಲ ಸಮೃದ್ಧವಾಗಿದೆ. ಕಣ್ಣಾಯಿಸಿದಷ್ಟು ದೂರಕ್ಕೂ ತುಂಬಿಕೊಂಡಿರುವ ನೀಲ ಜಲರಾಶಿಯನ್ನು ನೋಡಿದಾಗ ಮನಸ್ಸು ಸಂತೃಪ್ತವಾಗುತ್ತದೆ. ಇಡೀ ಮಂಗಳೂರು ನಗರಕ್ಕೆ ಕುಡಿಯಲು ಸೇರಿದಂತೆ ದಿನಬಳಕೆಗೆ ನೀರು ಬಂಟ್ವಾಳದಿಂದಲೇ ಸರಬರಾಜಾಗುತ್ತಿದೆ. ಆದರೆ ಪಾವನೆ ನೇತ್ರಾವತಿಯ ಒಡಲು ಮಾತ್ರ ಶುದ್ಧವಾಗಿಲ್ಲ!

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದ ಕಾರಣ ಚರಂಡಿಯ ಕೊಳಚೆ ನೀರು ಅಲ್ಲಲ್ಲಿ ಜೀವನದಿಯ ಒಡಲು ಸೇರುತ್ತಿದೆ. ದೂರದ ಮಂಗಳೂರಿನ ಜನರಿಗೆ ತುಂಬೆಯಲ್ಲಿ ಶುದ್ಧೀಕರಣಗೊಂಡ ನೀರು ಪೈಪ್ ಮೂಲಕ ಮನೆ ಮನೆಗೆ ಸರಬರಾಜಾಗುತ್ತಿದೆ. ಬಂಟ್ವಾಳದ 12 ಕಡೆಗಳಲ್ಲಿ ಚರಂಡಿ ನೀರು ನೇರವಾಗಿ ನದಿಗೆ ಸೇರುತ್ತಿದ್ದು, ಈ ಕೊಳಚೆಯನ್ನು ಕಣ್ಣಾರೆ ಕಂಡರೆ ವಾಕರಿಕೆ ಬರುವುದು ಸತ್ಯ. ಇನ್ನು ಬಂಟ್ವಾಳ ಪುರಸಭೆಯ ಜನತೆಗೂ ಇದೇ ನೀರು ಪೈಪ್ ಮೂಲಕ ಪೂರೈಕೆಯಾಗುತ್ತಿದೆ. ಇಲ್ಲಿ ಕೂಡ ಹೆಸರಿಗಷ್ಟೇ ಶುದ್ಧೀಕರಣಗೊಳ್ಳುತ್ತದೆ. ಕೊಳಚೆ ಮಿಶ್ರಿತ ಅಶುದ್ಧ ನೀರನ್ನೇ ಬಂಟ್ವಾಳದ ಜನರು ಕುಡಿಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನದಿ ತೀರದ ಜನರು ನೀರನ್ನು ನೇರವಾಗಿ ಕೃಷಿಗೆ, ಮನೆ ಬಳಕೆಗೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಕೊಳಚೆ ನೀರು

ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದಲ್ಲಿ ಅತಿಹೆಚ್ಚು ಕಡೆಗಳಲ್ಲಿ ಕೊಳಚೆ ನೀರು, ಕೊಳೆತ ತ್ಯಾಜ್ಯವಸ್ತುಗಳು ನೇತ್ರಾವತಿ ಒಡಲಿಗೆ ಸೇರುತ್ತಿವೆ. ಬಿ.ಸಿ.ರೋಡು ನಗರದಲ್ಲಿ ವಸತಿ ಸಂಕೀರ್ಣಗಳು, ಬಡಾವಣೆಗಳು, ಮನೆಗಳು, ಹೋಟೆಲ್‌ಗಳು ಹೆಚ್ಚಿದ್ದು ಇವುಗಳ ಮಲಿನ ನೀರು ಚರಂಡಿ ಮೂಲಕ ನದಿ ಸೇರಿದರೆ, ತ್ಯಾಜ್ಯವಸ್ತುಗಳು, ಬಾಟಲ್ ಸಹಿತ ಇನ್ನಿತರ ವಸ್ತುಗಳು ನದಿ ನೀರಿನಲ್ಲಿ ತೇಲಾಡುತ್ತಿರುತ್ತವೆ. ಬಿ.ಸಿ.ರೋಡಿನ ಮಪತ್ ಲಾಲ್ ಲೇಔಟ್, ಆರಾಧ್ಯ ಲೇಔಟ್ ಬಳಿ, ಬಸ್ತಿಪಡ್ಪು, ಕಂಚಿಕಾರಪೇಟೆ, ಗೂಡಿನ ಬಳಿ ಹಾಗೂ ಬಂಟ್ವಾಳ ಬಡ್ಡಕಟ್ಟೆ ಮಾರುಕಟ್ಟೆ ಹಿಂಭಾಗ, ತಿರುಮಲ ವೆಂಕಟರಮಣ ದೇವಾಲಯದ ನದಿಕಿನಾರೆ ಸೇರಿದಂತೆ ಪಾಣೆಮಂಗಳೂರಿನ ವಿವಿಧ ಕಡೆಗಳಲ್ಲಿ ಹೀಗೆ ಸದ್ಯಕ್ಕೆ ಸುಮಾರು 12 ಕಡೆಗಳಲ್ಲಿ ಕೊಳಚೆ ನೀರು ನೇತ್ರಾವತಿ ನದಿ ಸೇರುತ್ತಿದೆ.

ಪುರಸಭೆಯ ಭೌಗೋಳಿಕ ಸ್ಥಿತಿಗನುಸಾರವಾಗಿ 7 ವೆಟ್‌ವೆಲ್ ಹಾಗೂ 2 ಮಲಿನ ನೀರು ಶುದ್ದೀಕರಣ ಘಟಕ ನಿರ್ಮಾಣವಾಗಬೇಕು, ಇದನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಗತಗೊಳಿಸಬೇಕಾಗಿದ್ದು, ಗುತ್ತಿಗೆ ವಹಿಸಿಕೊಂಡವರು ಕಾಮಗಾರಿ ಆರಂಭಿಸಿದ್ದರು. ವೆಟ್‌ವೆಲ್ ಮತ್ತು ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಜಮೀನು ಕೂಡ ಗುರುತಿಸಲಾಗಿತ್ತು. ಈ ಪೈಕಿ ವೆಟ್‌ವೆಲ್ ನಿರ್ಮಾಣಕ್ಕೆ ಐದು ಕಡೆ ಜಮೀನು ಸಂಬಂಧಪಟ್ಟವರಿಗೆ ಹಸ್ತಾಂತರವಾದರೆ, ಎರಡು ಕಡೆ ಜಮೀನು ಹಸ್ತಾಂತರವಾಗಿಲ್ಲ, ಒಂದು ಕಡೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೆ, ಮತ್ತೊಂದು ಕಡೆಯ ಜಮೀನಿನಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ ಎಂದು ಗುರುವಾರ ಪುರಸಭೆಯ ಸಾಮಾನ್ಯಸಭೆಯಲ್ಲಿ ಗಂಭೀರ ಚರ್ಚೆ ನಡೆದಿತ್ತು.

ಮೊದಲ ಹಂತದ ಒಳಚರಂಡಿ ಯೋಜನೆಯ ಕಾಮಗಾರಿ ಬಿ.ಮೂಡ ಗ್ರಾಮದಲ್ಲಿ ಏನೋ ಕಾರ್ಯರೂಪಕ್ಕೆ ಬಂದಿತ್ತಾದರೂ, ಬಂಟ್ವಾಳ ಕಸ್ಬಾ ಗ್ರಾಮದತ್ತ ಸುಳಿಯಲೇ ಇಲ್ಲ. ಅದಾಗಲೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನಗಳು ಉಂಟಾಗಿ ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿತ್ತು. ಅಲ್ಲಲ್ಲಿ ರಸ್ತೆ ಅಗೆದು ನಿರ್ಮಿಸಲಾದ ವೆಟ್‌ವೆಲ್‌ಗಳನ್ನು ಲೈಟ್ ಹಾಕಿ ಹುಡುಕಬೇಕಾದ ಸ್ಥಿತಿ ಇದೆ. ಕೆಲವು ವೆಟ್‌ವೆಲ್ ಕಾಣಲು ಸಿಗತ್ತದೆಯಾದರೂ ಅದನ್ನು ಪೊದೆಗಳು ಆವರಿಸಿಕೊಂಡು ನಿಷ್ಪ್ರಯೋಜಕವಾಗುತ್ತಿದೆ. ಈ ಮಧ್ಯೆ ಎರಡನೇ ಹಂತದ ಒಳಚರಂಡಿ ಯೋಜನೆಗೆ 56.54 ಕೋ.ರೂ.ಮಂಜೂರುಗೊಂಡು ವರ್ಷವೇ ಉರುಳಿದೆ.

ನಿಷ್ಪ್ರಯೋಜಕ ಒಳಚರಂಡಿ ಯೋಜನೆ

ಪುರಸಭಾ ವ್ಯಾಪ್ತಿಯ ಮಲಿನ ನೀರು ನದಿ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೂಲಕ ಒಳಚರಂಡಿ ಕಾಮಗಾರಿಯನ್ನು ನಡೆಸಲಾಗಿದೆ. ಆದರೆ ಈ ಕಾಮಗಾರಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಯೋಜನೆ ಅನುಷ್ಠಾನಕ್ಕೆ ಬಳಸಿದ ಕೋಟ್ಯಂತರ ರೂಪಾಯಿ ಮಣ್ಣಿನಡಿ ವ್ಯರ್ಥವಾಗುತ್ತಿದೆ. ಬಂಟ್ವಾಳ ಪುರಸಭೆಗೆ 2011ರಲ್ಲಿ ಮೊದಲ ಹಂತವಾಗಿ 16.62 ಕೋ.ರೂ.ವೆಚ್ಚದ ಒಳಚರಂಡಿ ಯೋಜನೆಗೆ ಮಂಜೂರಾತಿ ದೊರೆತು ಕಾಮಗಾರಿ ಆರಂಭಗೊಂಡಿತ್ತು.

ಬಂಟ್ವಾಳದಲ್ಲಿ ನೇತ್ರಾವತಿ ನದಿಗೆ ಚರಂಡಿಯ ಮಲಿನ ನೀರು ಸೇರುತ್ತಿದೆ. ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾದ ಒಳಚರಂಡಿ ಇಲ್ಲದ ಕಾರಣ 12 ಕಡೆಗಳಲ್ಲಿ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಯ ಒಡಲು ಸೇರುತ್ತಿದೆ.ಇದನ್ನೇ ಮಂಗಳೂರು,ಬಂಟ್ವಾಳದ ಜನತೆ ಕುಡಿಯಲು ಬಳಕೆ ಮಾಡುತ್ತಿದ್ದು, ಲಕ್ಷಾಂತರ ಜನರ ಬದುಕಿನ ಪ್ರಶ್ನೆಯಾಗಿದೆ. ಜಿಲ್ಲಾಧಿಕಾರಿಯವರು ಕೊಳಚೆ ನೀರು ಹರಿಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಎ.ಗೋವಿಂದಪ್ರಭು ವಿಪಕ್ಷ ಸದಸ್ಯರು, ಬಂಟ್ವಾಳ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net