

ಬೆಂಗಳೂರು: ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಎಬಿಎಚ್) ಮಾನ್ಯತೆಗೆ ರಾಜ್ಯದ ಪ್ರತಿಷ್ಠಿತ ನೆಫ್ರೋ ಯುರಾಲಜಿ ಸಂಸ್ಥೆ ಭಾಜನವಾಗಿದೆ. ಕರ್ನಾಟಕದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಂತರ ಈ ಸ್ಥಾನಮಾನ ಪಡೆದ 2ನೇ ಸರ್ಕಾರಿ ಸಂಸ್ಥೆ ಇದಾಗಿದೆ.
ಈ ಕುರಿತು ಮಾತನಾಡಿದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಈ ಮಾನ್ಯತೆ ಪಡೆದ ಆಸ್ಪತ್ರೆಗಳು ರೋಗಿಗಳ ಸುರಕ್ಷತೆ ಮತ್ತು ಆರೈಕೆಯಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸುತ್ತದೆ. ಆರೋಗ್ಯ ಆರೈಕೆ ಗುಣಮಟ್ಟ ಸೊಸೈಟಿ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ನೀಡುವ ಗುಣಮಟ್ಟದ ಪ್ರಮಾಣಪತ್ರ ಪಡೆದುಕೊಂಡಿದೆ. ರೋಗಿಯ ಸುರಕ್ಷತೆ, ಆರೈಕೆಯ ಗುಣಮಟ್ಟ, ಸೋಂಕು ನಿಯಂತ್ರಣ, ಮೂಲಸೌಕರ್ಯ ಮತ್ತು ಸಿಬ್ಬಂದಿ ಅರ್ಹತೆ ಸೇರಿ ಹಲವು ಮಾನದಂಡಗಳನ್ನು ಅನುಸರಿಸಿದರೆ ಮಾನ್ಯತೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಈ ಮಾನ್ಯತೆ ದೊರೆತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಸಂಸ್ಥೆಯ ನಿರ್ದೇಶಕ ಡಾ. ಎಂ. ಶಿವಲಿಂಗಯ್ಯ ಮಾತನಾಡಿ, ರೋಗಿಗೆ ಸುರಕ್ಷಿತ ಮತ್ತು ಪ್ರಮಾಣೀಕೃತ ಚಿಕಿತ್ಸೆ, ಆರೈಕೆ ಮತ್ತು ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಾನ್ಯತೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಆಯುಷ್ಮಾನ್ ಭಾರತ್, ಡಿಜಿಟಲ್ ಆರೋಗ್ಯ ಮಿಷನ್ ಮತ್ತು ರಾಜ್ಯ ವಿಮಾ ಕಾರ್ಯಕ್ರಮಗಳಂತಹ ಯೋಜನೆಗಳಲ್ಲಿ ಎನ್‌ಎಬಿಎಚ್ ಮಾನ್ಯತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.