

ಸುಬ್ರಹ್ಮಣ್ಯ: ಕಡಬ ತಾಲೂಕಿನ ಏನೆಕಲ್ ಗ್ರಾಮದ ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಮಂಗಳವಾರ ಮಹಿಮಾತ್ಮಕ ಶ್ರೀ ಬಚ್ಚನಾಯಕ ದೈವದ ನೇಮೋತ್ಸವ ಜರುಗಿತು. ಸಹಸ್ರಾರು ಭಕ್ತರು ಕಾರಣಿಕ ದೈವದ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಕನ್ನಡದಲ್ಲಿ ನುಡಿ: ಬಚ್ಚನಾಯಕ ದೈವ ಭಕ್ತರಿಗೆ ಕನ್ನಡದಲ್ಲಿ ಅಭಯ ನೀಡಿತು. ಅರಿಕೆ ಮಾಡಿದ ಭಕ್ತರಿಗೆ, ಅಭೀಷ್ಠೆ ಈಡೇರಿದವರಿಗೆ ಕನ್ನಡದಲ್ಲಿ ಅಭಯ ವ್ಯಾಖ್ಯೆ ನೀಡಿತು. ಸೋಮವಾರ ರಾತ್ರಿ ಅನ್ನಸಂತರ್ಪಣೆ, ಮಂಗಳವಾರ ಬೆಳಗ್ಗೆ ಉಪಹಾರ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಶಂಖಪಾಲ ಸುಬ್ರಹ್ಮಣ್ಯ ಜಾತ್ರೋತ್ಸವ: ಈ ಮೊದಲು ಏನೆಕಲ್‌ನ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯಿತು. ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ವಿವಿಧ ವಿಧಿವಿಧಾನಗಳನ್ನು ವೈದಿಕರು ನೆರವೇರಿಸಿದರು. ಸಹಸ್ರಾರು ಭಕ್ತರು ದೇವರ ಉತ್ಸವಾದಿಗಳನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ಗೊನೆ ಮುಹೂರ್ತದ ಮೂಲಕ ಜಾತ್ರಾ ವಿಧಿವಿಧಾನಗಳಿಗೆ ಚಾಲನೆ ದೊರಕಿತ್ತು. ಮುಂಜಾನೆ ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ತದನಂತರ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಜನೆ ರಂಗಪೂಜೆ, ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆಪೂಜೆ, ಪ್ರಸಾದ ವಿತರಣೆ ನಡೆಯಿತು.
ಕೋಟಿ ನಾಯಕ ನೇಮೋತ್ಸವ
ಬಚ್ಚನಾಯಕ ದೈವದ ಬಳಿಕ ಕೋಟಿನಾಯಕ ದೈವದ ನೇಮೋತ್ಸವ ನೆರವೇರಿತು. ಭಕ್ತರು ಶ್ರೀ ದೈವದ ನೇಮ ನಡಾವಳಿ ವೀಕ್ಷಿಸಿದರು. ರಾತ್ರಿ ಪ್ರಧಾನಿ ಮೊದಲಾದ ದೈವಗಳ ನೇಮ, ಬಳಿಕ ಭಂಡಾರ ಹೊರಡುವ ಕಾರ್ಯಕ್ರಮ ನೆರವೇರಿತು. ಈ ಮೊದಲು ಶ್ರೀ ಉಳ್ಳಾಕುಲು, ಉಳ್ಳಾಲ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ಉಗ್ರಾಣ ಮುಹೂರ್ತ, ಮುಹೂರ್ತ ತೋರಣ ನಡೆಯಿತು. ಬಳಿಕ ಉಳ್ಳಾಕುಲು ಮೊದಲಾದ ದೈವಗಳ ನೇಮ, ಉಳ್ಳಾಳ್ತಿ ವಗೈರೆ ದೈವಗಳ ನೇಮ, ಉಡ್ಡೋತ್ತಾರು, ಕುಮಾರ ದೈವಗಳ ನೇಮ ನೆರವೇರಿತು.
ಹರಕೆ ಸಮರ್ಪಣೆ
ಭಕ್ತರು ದೈವದಲ್ಲಿ ಇಷ್ಟಾರ್ಥ ಈಡೇರಿಕೆಗಾಗಿ ಹರಕೆ ಮಾಡಿದರು. ಇಷ್ಟಾರ್ಥ ಪೂರೈಕೆಯಾದ ಸಹಸ್ರಾರು ಭಕ್ತರು ಹರಕೆ ತೀರಿಸಿದರು. ಕೆಲವರು ದೈವಕ್ಕೆ ಭಕ್ತಿ ಹರಕೆ ರೂಪದಲ್ಲಿ ಚಿನ್ನದ ಮೀಸೆ ಅರ್ಪಿಸಿದರು. ಸೀರೆ, ದೀಪ ಸಮರ್ಪಿಸಿದರು. ಸೋಮವಾರ ರಾತ್ರಿಯಿಂದಲೇ ಭಕ್ತರು ದೈವಸ್ಥಾನಕ್ಕೆ ಆಗಮಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.