

ಸಿದ್ದಾಪುರ: ಸಮೀಪದ ನೆಲ್ಯಹುದಿಕೇರಿ ಪ್ರವಾಹ ಸಂತ್ರಸ್ತರಿಗೆ ನಿವೇಶನ ಕಲ್ಪಿಸುವ ಸಲುವಾಗಿ ಶೀಘ್ರದಲ್ಲೇ ವಸತಿ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿ ಪರಿಹಾರ ಕಲ್ಪಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು.
ಪ್ರವಾಹ ಸಂತ್ರಸ್ತರ ಪುನರ್ವಸತಿ ಕುರಿತು ಭಾನುವಾರ ನೆಲ್ಯಹುದಿಕೇರಿ ಕೆಂ ಸಭಾಂಗಣದಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಪ್ರವಾಹ ಸಂತ್ರಸ್ತರ ಪಟ್ಟಿಯಲ್ಲಿನ ತಿದ್ದುಪಡಿ ಹಾಗೂ ಜಾಗದ ಕೆಲವು ಸಮಸ್ಯೆಗಳಿಂದ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಹ ಸಂತ್ರಸ್ತರಿಗೆ ಗುರುತಿಸಿರುವ ಜಾಗವನ್ನು ಹಸ್ತಾಂತರಿಸಲು ಸಾಧ್ಯವಾಗಿರಲಿಲ್ಲ. ನಾಲ್ಕೈದು ತಿಂಗಳ ಹಿಂದೆ ಸಂತ್ರಸ್ತರ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ವಸತಿ ನಿಗಮಕ್ಕೆ ಜವಾಬ್ದಾರಿ ವಹಿಸಿ ಬಡಾವಣೆ ನಿರ್ಮಾಣಕ್ಕೆ 30ರಿಂದ 40 ಲಕ್ಷ ರೂ.ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿದ್ದರು. ಇದುವರೆಗೆ ಸುಮಾರು 4ರಿಂದ 8 ಲಕ್ಷ ರೂ.ನಷ್ಟು ಕೆಲಸ ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಇನ್ನೂ ಹೆಚ್ಚಿನ ಜನರಿಗೆ ಸೌಲಭ್ಯ ಕಲ್ಪಿಸುವಂತೆ ಅವಕಾಶ ನೀಡಲಾಗುವುದು. 140 ಸಂತ್ರಸ್ತರ ಕುಟುಂಬಗಳ ಪೈಕಿ 20ಕ್ಕೂ ಹೆಚ್ಚು ಜನರು ವೈಯಕ್ತಿಕವಾಗಿ ಜಾಗ ಖರೀದಿಸಿರುವ ಹಾಗೂ 10ರಿಂದ 15 ಜನರಿಗೆ ಸಂಘ-ಸಂಸ್ಥೆಗಳು ವ್ಯವಸ್ಥೆ ಕಲ್ಪಿಸಿರುವ ಮಾಹಿತಿ ಲಭ್ಯವಾಗಿದೆ. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಸಭೆ ಅಥವಾ ವಾರ್ಡ್ ಸಭೆ ಮೂಲಕ ಸಂತ್ರಸ್ತರ ಪಟ್ಟಿಯನ್ನು ತಿದ್ದುಪಡಿ ಮಾಡಿ ಕಷ್ಟದಲ್ಲಿರುವವರಿಗೆ ಶೀಘ್ರ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಪ್ರವಾಹ ಸಂತ್ರಸ್ತರ ಪೈಕಿ ಸಿ ಪಟ್ಟಿಯಲ್ಲಿರುವವರಿಗೆ ಇದುವರೆಗೂ ಯಾವುದೇ ಪರಿಹಾರ ಸಿಗಲಿಲ್ಲವೆಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.
ಸಭೆಯಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ನೋಡಲ್ ಅಧಿಕಾರಿ ಭಾನುಪ್ರಕಾಶ್, ನೆಲ್ಯಹುದಿಕೇರಿ ಪಿಡಿಒ ನಂಜುಂಡಸ್ವಾಮಿ, ವಾಲ್ನೂರು ತ್ಯಾಗತ್ತೂರು ಪಿಡಿಒ ಮೇದಪ್ಪ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮೀ, ಪ್ರಮುಖರಾದ ವಿ.ಪಿ.ಶಶಿಧರ್, ಕೆ.ಎಂ.ಬಶೀರ್, ಸುನಿತಾ ಮಂಜುನಾಥ್, ಎ.ಕೆ.ಹಕೀಂ ಮತ್ತಿತರರಿದ್ದರು.