ಮಳೆ ನೀರಿಗೆ ಸೋರಿಕೆ, ನೆಲ್ಲೂಡಿ ಗ್ರಾಪಂ ಕಟ್ಟಡ ನಿರ್ಮಾಣ ಯಾವಾಗ ?

Nelludi Grama panchayat
ಶಿಥಿಲಗೊಂಡ ನೆಲ್ಲೂಡಿ ಗ್ರಾಪಂ.ಕಚೇರಿ ಕಟ್ಟಡದ ಹೊರ ನೋಟ. ನೆಲ್ಲೂಡಿ ಗ್ರಾಪಂ.ಕಚೇರಿ ಕಟ್ಟಡದ ಶಿಥಿಲಗೊಂಡ ಮೇಲ್ಚಾವಣಿಯ ನೋಟ.
Published on

ಕಂಪ್ಲಿ: ತಾಲೂಕಿನ ನೆಲ್ಲೂಡಿ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದು, ಮಳೆ ನೀರಿಗೆ ಸೋರುತ್ತಿದೆ. 2002-03ನೇ ಸಾಲಿನಲ್ಲಿ ಕುರುಗೋಡು ಶಾಸಕ ಅಲ್ಲಂ ವೀರಭದ್ರಪ್ಪ ಗ್ರಾಪಂ ಕಟ್ಟಡವನ್ನು ಉದ್ಘಾಟಿಸಿ ಚಾಲನೆಗೊಳಿಸಿದ್ದರು. ಇದೀಗ ಎರಡು ದಶಕಗಳ ಮೇಲ್ಚಾವಣಿ ಶಿಥಿಲಗೊಂಡು ಮಳೆ ನೀರು ಸೋರುತ್ತಿದೆ.

ಸಿಮೆಂಟ್ ಉದುರುತ್ತಿದೆ. ಮಳೆನೀರು ಸೋರಿ ದಾಖಲೆ ಹಾಗೂ ಕಂಪ್ಯೂಟರ್ ರಕ್ಷಣಾ ವ್ಯವಸ್ಥೆಗೆ ತೊಂದರೆಯಾಗಿದೆ. ರಸ್ತೆಗಿಂತ ಕೆಳಮಟ್ಟದಲ್ಲಿ ಕಟ್ಟಡ ಇದ್ದು ಮಳೆ ನೀರು ನುಗ್ಗುತ್ತದೆ. ಗ್ರಾಪಂಗೆ ಹೊಸ ಕಟ್ಟಡ ನಿರ್ಮಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಒತ್ತಾಯಿಸಿದ್ದರೂ ನೂತನ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬರುತ್ತಿಲ್ಲ.

ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವ ಅಗತ್ಯತೆಯಿದೆ. ಆದರೆ ಗ್ರಾಪಂ ಸದಸ್ಯರು ಸಭೆಯಲ್ಲಿ ಚರ್ಚಿಸಿ, ಈಗಿರುವ ಕಟ್ಟಡದ ಹಿಂದೆ ಐದುಸೆಂಟ್ಸ್ ಜಾಗ ತೆಗೆದುಕೊಂಡು ಅಲ್ಲಿ ಹೊಸ ಕಟ್ಟಿಸಬೇಕು. ಹಳೆಯ ಕಟ್ಟಡ ತೆರವು ಸ್ಥಳವನ್ನು ಆವರಣ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುವ ಚಿಂತನೆಯಲ್ಲಿದ್ದಾರೆ.

ಗ್ರಾಪಂ ಕಟ್ಟಡ ಎರಡು ದಶಕ ಹಳೆಯದಾಗಿದೆ. ಮಳೆನೀರಿಗೆ ದಾಖಲೆಗಳೆಲ್ಲ ತೋಯುತ್ತಿವೆ. ಗ್ರಾಮೀಣ ಜನತೆಗೆ ಅಗತ್ಯವುಳ್ಳ ಎಲ್ಲ ಸೌಲಭ್ಯ, ಯೋಜನೆಗಳನ್ನು ಗ್ರಾಪಂ.ಆಡಳಿತ ಒದಗಿಸಬೇಕಿದೆ. ತುರ್ತಾಗಿ ನೂತನ ಕಟ್ಟಡ ನಿರ್ಮಿಸುವಲ್ಲಿ ಗ್ರಾಪಂ ಆಡಳಿತ ಮುಂದಾಗಬೇಕು.| ಎ.ಲಕ್ಷ್ಮೀಪತಿ, ಡಿಎಸ್‌ಎಸ್ (ಪ್ರೊ.ಕೃಷ್ಣಪ್ಪ ಬಣ), ತಾಲೂಕು ಸಂಚಾಲಕ, ನೆಲ್ಲೂಡಿ. ನೆಲ್ಲೂಡಿ ಗ್ರಾಪಂಗಾಗಿ ನೂತನ ಕಟ್ಟಡ ಕಟ್ಟಿಸಲು ಜಾಗದ ಸಮಸ್ಯೆಯಿದೆ. ಗ್ರಾಪಂಗಾಗಿ ಭೂಮಿ ದಾನ ನೀಡಿದ್ದು ಪಹಣಿ ಆಗಬೇಕಿದೆ. 11ಬಿ ದಾಖಲೆ ಪಡೆದುಕೊಂಡ ನಂತರ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.| ಜಯಮ್ಮ, ಗ್ರಾಪಂ ಅಧ್ಯಕ್ಷೆ, ನೆಲ್ಲೂಡಿ. ನೆಲ್ಲೂಡಿ ಗ್ರಾಪಂ ನೂತನ ಕಟ್ಟಡ ಅಗತ್ಯವಿದೆ. ನರೇಗಾದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಗ್ರಾಪಂ ಕಟ್ಟಡ ತೆರವುಗೊಳಿಸುವಾಗ ಪರ್ಯಾಯವಾಗಿ ಇನ್ನೊಂದು ಕಟ್ಟಡ ಗುರುತಿಸಬೇಕಿದೆ. ಸದ್ಯಕ್ಕೆ ಹೊಸ ಕಟ್ಟಡ ನಿರ್ಮಿಸುವ ಯೋಜನೆಯಿಲ್ಲ.| ಆರ್.ಕೆ.ಶ್ರೀಕುಮಾರ್, ಇಒ, ತಾಪಂ, ಕಂಪ್ಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net