24 ಗಂಟೆಯು ಬೀಗ ಹಾಕಿರುವ ನೆಲಹಾಲ್​ ಪೊಲೀಸ್​ ಔಟ್​ಪೋಸ್ಟ್​ !

police outpost
Published on

ವಿಶೇಷ ವರದಿ

ತುಮಕೂರು: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನೆಲಹಾಲ್​ ಪೊಲೀಸ್​ ಔಟ್​ ಪೋಸ್ಟ್​ಗೆ ದಿನದ 24 ಗಂಟೆಯು ಬೀಗ ಹಾಕಲಾಗಿರುತ್ತದೆ ! ನೆಲಹಾಲ್​ ಸುತ್ತಮುತ್ತಲಿನ ಜನರು ಪೊಲೀಸ್​ ತುರ್ತು ಸೇವೆಯಿಂದ ವಂಚಿತರಾಗಿದ್ದಾರೆ.

ಈ ಭಾಗದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಹೆದ್ದಾರಿಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಜತೆಗೆ ವಸಂತನರಸಾಪುರ ಕೈಗಾರಿಕಾ ಪ್ರದೇಶವು ಸಮೀಪವಿದ್ದು ಉತ್ತರಭಾರತೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ಜನರಿಗೆ ತಕ್ಷಣಕ್ಕೆ ಪೊಲೀಸ್​ ಸೇವೆ ಸಿಗಬೇಕೆಂಬ ಕಾರಣಕ್ಕೆ ತೆರೆದಿರುವ ನೆಲಹಾಲ್​ ಉಪ ಪೊಲೀಸ್​ ಠಾಣೆಗೆ ಮಾತ್ರ ಸದಾ ಕಾಲ ಬೀಗ ಜಡಿಯಲಾಗಿರುತ್ತದೆ.

ತುಮಕೂರು ಪೊಲೀಸ್​ ಉಪ ವಿಭಾಗ ವ್ಯಾಪ್ತಿಗೆ ಬರುವ ನೆಲಹಾಲ್​ ಔಟ್​ಪೋಸ್ಟ್​ ಅನ್ನು 1970ರಲ್ಲಿ ತೆರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಟನೆ ಸಂಭವಿಸಿದರೆ ಕೋರ ಹಾಗೂ ಕಳ್ಳಂಬೆಳ್ಳ ಪೊಲೀಸ್​ ಠಾಣೆ ಸಾಕಷ್ಟು ದೂರವಿರುವುದರಿಂದ ತುರ್ತು ಪೊಲೀಸ್​ ಸೇವೆಗೆ ಉಪಪೊಲೀಸ್​ ಠಾಣೆ ತೆರಯಲಾಗಿತ್ತು. ಇನ್ನೂ ಈ ಪ್ರದೇಶದಲ್ಲಿ ಉತ್ತರಭಾರತೀಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಅಪರಾಧ ಚಟುವಟಿಕೆಗಳು ಹೆಚ್ಚುವ ಸಾಧ್ಯತೆಗಳಿವೆ. ಅಲ್ಲದೆ, ಪ್ರತಿನಿತ್ಯ ಹೆದ್ದಾರಿಯಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಲೇ ಇರಲಿದ್ದು ನೆಲಹಾಲ್​ ಔಟ್​ಪೋಸ್ಟ್​ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ. ಉಪ ಠಾಣೆಯಲ್ಲಿ ಪೊಲೀಸ್​ ಸಿಬ್ಬಂದಿ ಕಂಡು ಎಷ್ಟೋ ದಿನಗಳಾಗಿವೆ.

ಮೂವರು ಸಿಬ್ಬಂದಿ: ಉಪ ಪೊಲೀಸ್​ ಠಾಣೆಯಲ್ಲಿ ಮುಖ್ಯಪೇದೆ ಸೇರಿ ಒಟ್ಟು ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ನೆಲಹಾಲ್​ ಔಟ್​ಪೋಸ್ಟ್​ ಬಾಗಿಲು ಮುಚ್ಚಿದ್ದು ಜನರ ತುರ್ತು ಸೇವೆಗೆ ಸಂಪೂರ್ಣವಾಗಿ ಬಂದ್​ ಆಗಿಬಿಟ್ಟಿದೆ. ಒಟ್ಟಾರೆ ಜಿಲ್ಲೆಯಲ್ಲಿ 11 ಪೊಲೀಸ್​ ಔಟ್​ಪೋಸ್ಟ್​ಗಳಿವೆ. ಠಾಣೆಗಳು ದೂರ ಇರುವ ಕಡೆ ಉಪ ಪೊಲೀಸ್​ ಠಾಣೆ ತೆರೆದಿದ್ದು ಎಲ್ಲಾ ಉಪ ವಿಭಾಗಗಳಲ್ಲು ಔಟ್​ಪೋಸ್ಟ್​ಗಳಿವೆ.

ಜಿಲ್ಲೆಯವರೇ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಪೊಲೀಸ್​ ವ್ಯವಸ್ಥೆಯನ್ನು ಸದೃಢಗೊಳಿಸುತ್ತಿದ್ದು ಜಿಲ್ಲೆಯ ಬಹುತೇಕ ಪೊಲೀಸ್​ ಠಾಣೆಗಳಿಗೆ ಕಾಯಕಲ್ಪ ಒದಗಿಸಿದ್ದಾರೆ. ಜನರಿಗೆ ತುರ್ತಾಗಿ ಪೊಲೀಸರ ಸೇವೆಗಾಗಿ ತೆರೆದಿರುವ ಉಪ ಠಾಣೆಗಳತ್ತ ಗೃಹಸಚಿವರು ಒಮ್ಮೆ ತಿರುಗಿ ನೋಡಬೇಕಿದೆ.

ನೆಲಹಾಲ್​ ಉಪ ಪೊಲೀಸ್​ ಠಾಣೆಗೆ ಬೀಗ ಹಾಕಿ ಬಹಳ ದಿನಗಳಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ದಿನ ಒಂದಲ್ಲ ಒಂದು ಅಪಘಾತ ಆಗುತ್ತಲೇ ಇರುತ್ತೆ. ಇನ್ನೂ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಗಿ ಬಿಹಾರಿಗಳೇ ತುಂಬಿದ್ದು ಪೊಲೀಸ್​ ಗಸ್ತಿನ ಜತೆಗೆ ಉಪಠಾಣೆಯ ಸೇವೆಯ ಅಗತ್ಯವಿದೆ. ಇನ್ನಾದರೂ ಬೀಗ ತೆರೆಸಿ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ನೇಮಿಸಬೇಕು. ಕವಿತಾರಮೇಶ್​ ತಾಪಂ ಮಾಜಿ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net