ನನ್ನನ್ನು ಸೋಲಿಸಲು ಇಡೀ ಸರ್ಕಾರವೇ ಬಂದಿದೆ : ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರ್‌ಸ್ವಾಮಿ ಆಕ್ರೋಶ

nnn
Published on

ಚನ್ನಪಟ್ಟಣ : ಚನ್ನಪಟ್ಟಣ ಉಪಕದನದ ಕಣ ರಂಗೇರಿದ್ದು, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ಬಿ.ವಿ.ಹಳ್ಳಿ, ಭೂಹಳ್ಳಿ ಹಾಗೂ ಸಿಂಗರಾಜಪುರ ಗ್ರಾಪಂ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ನಿಖಿಲ್ಗೆ ಅಭೂತಪೂರ್ವ ಸ್ವಾಗತ ದೊರಕಿತು.

ಈ ವೇಳೆ ಮತಯಾಚಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಎರಡು ಬಾರಿ ಚುನಾವಣೆಯಲ್ಲಿ ರಾಜಕೀಯ ಷಡ್ಯಂತ್ರಗಳಿಂದ ಸೋತಿದ್ದೇನೆಯೇ ವಿನಃ ಜನಾಭಿಪ್ರಾಯದಿಂದಲ್ಲ. ಹಿಂಬಾಗಿಲು ಮೂಲಕ ರಾಜಕಾರಣ ಮಾಡುವುದಕ್ಕೆ ನನಗೆ ಇಷ್ಟು ಸಮಯ ಬೇಕಿರಲಿಲ್ಲ. ಜನಾಶೀರ್ವಾದ ಮೂಲಕ ಜನಪ್ರತಿನಿಧಿಯಾಗಿ ಜನರ ಹೃದಯದಲ್ಲಿ ನೆಲೆಸುವ ಆಸೆ ನನ್ನದು. ನಿಮ್ಮ ಆಶೀರ್ವಾದ ಸಿಗುವ ಭರವಸೆಯಿದೆ. ನಿಮ್ಮ ಮನೆಮಗನ ರೀತಿ ಸೇವೆ ಮಾಡುವ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಈ ಚುನಾವಣೆಯಲ್ಲಿ ಮತ್ತೊಮ್ಮೆ ನನ್ನ ಸೋಲಿಸಲು ಇಡೀ ರಾಜ್ಯ ಸರ್ಕಾರವೇ ಬಂದಿದೆ. ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಯಾವುದೇ ಅಪಪ್ರಚಾರಕ್ಕೆ ಕ್ಷೇತ್ರದ ಜನತೆ ಕಿವಿಕೊಡುವುದಿಲ್ಲ ಎಂಬ ನಂಬಿಕೆಯಿದೆ. ಈ ಚುನಾವಣೆಯಲ್ಲಿ ನನ್ನನ್ನು ಹರಸಬೇಕು. ತಾತ ಹಾಗೂ ತಂದೆಯ ಹಾದಿಯಲ್ಲಿ ನಡೆದು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಮಾಜಿ ಸಚಿವ, ಸಂಸದ ಕೋಟ ಶ್ರೀನಿವಾಸಪೂಜಾರಿ ಮಾತನಾಡಿ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಬಡ ಸಾಮಾನ್ಯ ಮಹಿಳಾ ವರ್ಗದವರಿಗೆ ಬದುಕು ಕಟ್ಟಿ ಕೊಡುವ ಕೆಲಸ ಮಾಡಿದ್ದರು. ಸಾಮಾನ್ಯ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ಶಕ್ತಿ ನಿಖಿಲ್ ಕುಮಾರಸ್ವಾಮಿಗೆ ಇದೆ. ಕಾಂಗ್ರೆಸ್‌ನಂಥ ಕೆಟ್ಟ ಸರ್ಕಾರವನ್ನು ನಾನು ಎಲ್ಲಿಯೂ ನೋಡಿಲ್ಲ. ರಾಜಕೀಯ ಇರುವುದು ಸಿಎಂ, ಪಿಎಂ ಆಗುವುದಕ್ಕೆ ಅಲ್ಲ. ಜನ ಸಾಮಾನ್ಯರ ಕೆಲಸ ಮಾಡುವುದಕ್ಕೆ, ಜನರ ಬದುಕು ಕಟ್ಟಿಕೊಡುವುದಕ್ಕೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net