ನೆಹರು ನಗರದ 3ನೇ ಕ್ರಾಸ್ ಥರ್ಡ್‌ಕ್ಲಾಸ್!

0301
Published on


ಬೆಳಗಾವಿ: ನೆಹರುನಗರದ 3ನೇ ಕ್ರಾಸ್ ರಸ್ತೆಯು ಥರ್ಡ್‌ಕ್ಲಾಸ್ ಆಗಿ ಬದಲಾಗಿದೆ. ನೀರು ಸರಬರಾಜು ಪೈಪ್‌ಲೈನ್ ಒಡೆದು ಪೋಲಾಗುತ್ತಿದ್ದರೂ ದುರಸ್ತಿಯಾಗಿಲ್ಲ. ರಸ್ತೆಯಲ್ಲಿ ತೆಗ್ಗು ಗುಂಡಿಗಳು ಸಂಚಾರಕ್ಕೆ ಸಂಚಕಾರ ತರುತ್ತಿವೆ. ಹೀಗೆ ವರ್ಷಗಳು ಕಳೆದರೂ ಈ ಸಮಸ್ಯೆಗಳು ಬಗೆ ಹರಿಯುತ್ತಿಲ್ಲ.

ಈ ರಸ್ತೆಯು ನಗರದ ಜನನಿಬಿಡ ಪ್ರದೇಶವಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಹದಗೆಟ್ಟು ವರ್ಷಗಳು ಉರುಳಿದರೂ ರಿಪೇರಿ ಭಾಗ್ಯ ಮಾತ್ರ ದೊರೆಯುತ್ತಿಲ್ಲ. ನೆಹರುನಗರ 3ನೇ ಕ್ರಾಸ್‌ನಿಂದ ಡಬಲ್ ರಸ್ತೆವರೆಗೆ ಹದಗೆಟ್ಟಿದೆ. ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ.

ಇದೇ ಮಾರ್ಗದಲ್ಲಿ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳು ಒಡೆದು ನೀರು ಪೋಲಾಗುತ್ತಿದೆ. ಜತೆಗೆ ಜನಸಂಚಾರಕ್ಕೂ ತೊಂದರೆಯಾಗಿದೆ. ಎಪಿಎಂಸಿ ರಸ್ತೆಯಿಂದ ಬಂದು ನೆಹರು ನಗರ 3ನೇ ಕ್ರಾಸ್ ರಸ್ತೆಯ ಮೂಲಕ ‘ಡಿ’ ಮಾರ್ಟ್ ಮಾರ್ಕೆಟ್, ಆಸ್ಪತ್ರೆ, ಶಾಲಾ-ಕಾಲೇಜುಗಳಿಗೆಂದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನಸಂಚಾರವಿರುತ್ತದೆ.

ಆಂಬುಲೆನ್ಸ್‌ಗಳು ಕೂಡಾ ಓಡಾಡುತ್ತವೆ. ಈ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಹೊತ್ತು ವಿಪರೀತ ಜನದಟ್ಟಣೆ ಆಗುತ್ತಿದ್ದು, ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತದೆ. ಅಧಿಕಾರಿಗಳು ಸುಗಮ ಸಂಚಾರಕ್ಕೆ ರಸ್ತೆ ರಿಪೇರಿ ಕಾರ್ಯ ಮಾಡಿಸುವ ಗೋಜಿಗೆ ಹೋಗುತ್ತಿಲ್ಲ.

ಈ ಪ್ರದೇಶ ಮೊದಲು ಮೂರು ವಾರ್ಡ್‌ಗಳಿಗೆ ಹರಿದು ಹಂಚಿ ಹೋಗಿತ್ತು. ಹೀಗಾಗಿ ಮೂಲಸೌಲಭ್ಯಗಳ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದೆ. ಪರಿಣಾಮ ನಾಗರಿಕರಿಗೆ ನಿತ್ಯ ತೊಂದರೆ ಉಂಟಾಗುತ್ತಿದೆ. ಮೂರು ಸರ್ಕಾರಗಳು ಬಂದರೂ ಈ ಸಮಸ್ಯೆ ಮಾತ್ರ ನಿವಾರಣೆಯಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲಿಸಲು ಹೇಳುತ್ತೇನೆ. ರಸ್ತೆ ದುರಸ್ತಿ ಸೇರಿ ಇತರ ಮೂಲಸೌಕರ್ಯ ಕೊರತೆ ಇದ್ದರೆ ಅಭಿವೃದ್ಧಿಪಡಿಸಲು ಸೂಚಿಸುತ್ತೇನೆ.| ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net