ನೆಹರುನಗರ- ಹಳಕಾರ ರಸ್ತೆ ದುರಸ್ತಿ ಮಾಡಿ

3KMT1
Published on

ಕುಮಟಾ: ಪಟ್ಟಣದ ನೆಹರುನಗರದಿಂದ ಹಳಕಾರ ರಸ್ತೆ ಸಂರ್ಪಸುವ ಪ್ರಮುಖ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ವಾಹನ ಸವಾರರ ಪಾಲಿಗಂತೂ ಅಪಾಯಕಾರಿಯಾಗಿದೆ.

ಹಳಕಾರ, ಹೆಗಡೆ, ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲ ಜನರಿಗೆ ತೀರಾ ಉಪಯುಕ್ತವಾದ ಈ ರಸ್ತೆ ಹಳಕಾರ ಮಾರ್ಗದ ರೈಲ್ವೆ ಸೇತುವೆ ಬಳಿಯಿಂದ ನೆಹರುನಗರದ ಸರ್ಕಾರಿ ಶಾಲೆವರೆಗೆ ಬಂದು ಮುಖ್ಯ ರಸ್ತೆಗೆ ಕೂಡಿಕೊಳ್ಳುತ್ತದೆ. ಪುರಸಭೆ ವ್ಯಾಪ್ತಿಗೊಳಪಟ್ಟು ಅನಾದಿಕಾಲದಿಂದ ಬಳಕೆಯಲ್ಲಿರುವ ಈ ರಸ್ತೆ ಯಾವತ್ತೂ ಸುಧಾರಣೆ ಕಂಡಿಲ್ಲ. 12 ವರ್ಷದ ಹಿಂದೆ ಈ ರಸ್ತೆ ಇನ್ನೂರು ಮೀಟರ್​ಗಳಷ್ಟು ಭಾಗಕ್ಕೆ ಜಲ್ಲಿ ಹಾಕಿ ಮೆಟಲಿಂಗ್ ಮಾಡಲಾಗಿತ್ತು. ಈಗ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ತುಂಬಾ ಜಲ್ಲಿಗಳೆದ್ದು, ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡ ನೂರಾರು ಉದಾಹರಣೆಗಳಿವೆ.

ಹೀಗಾಗಿ ಕೊಂಕಣ ರೈಲ್ವೆ ನಿಲ್ದಾಣದ ಬಳಿ ವಾಹನ ಸವಾರರು ಜಲ್ಲಿ ಎದ್ದಿರುವ ರಸ್ತೆಯನ್ನು ಬಿಟ್ಟು ಪಕ್ಕದ ಹಿಂಡುಪೊದೆಗಳ ನಡುವೆ ದಾರಿ ಮಾಡಿಕೊಂಡು ಸಂಚರಿಸುತ್ತಿದ್ದಾರೆ. ಇದು ರಸ್ತೆಯ ದುಸ್ಥಿತಿಗೆ ಸಾಕ್ಷಿಯಾಗಿದೆ. ಈ ಕುರಿತು ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ ಪ್ರತಿಕ್ರಿಯಿಸಿ, ರಸ್ತೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕುಮಟಾ ಪೇಟೆಗೆ ತೀರಾ ನಿಕಟ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಕೂಡಲೇ ರಸ್ತೆ ಸರಿಪಡಿಸಿ ಡಾಂಬರೀಕರಣ ಮಾಡಬೇಕು ಎಂದು ಸ್ಥಳೀಯರಾದ ಎಂ.ಎಸ್. ನಾಯ್ಕ, ಗಣಪತಿ ನಾಯ್ಕ, ಗಜಾನನ ಜಿ,. ರಾಜೇಶ ಶಾನಭಾಗ, ಪ್ರಸನ್ನ ಭಟ್ ಇತರರು ಮನವಿ ಮಾಡಿದ್ದಾರೆ.

ನೆಹರುನಗರದಿಂದ ಹಳಕಾರ ಸಂರ್ಪಸುವ ರಸ್ತೆ ಡಾಂಬರೀಕರಣ ಮಾಡುವ ಅಗತ್ಯವಿದೆ. ಈ ಬಗ್ಗೆ ಶಾಸಕ ದಿನಕರ ಶೆಟ್ಟಿ ಅವರ ಗಮನಕ್ಕೆ ತಂದಿದ್ದೇನೆ. ಮುಂಬರುವ ನಗರೋತ್ಥಾನ ಯೋಜನೆಯಡಿ ಅಥವಾ ಶಾಸಕರ ನಿಧಿಯಿಂದ ಆದರೂ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.| ತುಳಸು ಗೌಡ, ನೆಹರುನಗರ ವಾರ್ಡ್ ಸದಸ್ಯ

ನೆಹರುನಗರ ಶಾಲೆಯಿಂದ ಹಳಕಾರ ರಸ್ತೆಯ ಕೂಡು ಮಾರ್ಗದ ಕೆಲಭಾಗ ಪುರಸಭೆ ವ್ಯಾಪ್ತಿಗೊಳಪಟ್ಟಿದೆ. ಈ ರಸ್ತೆಗೆ ಡಾಂಬರೀಕರಣ ಮಾಡುವ ವಿಚಾರ ಗಮನದಲ್ಲಿದೆ. ಅನುದಾನ ಹೊಂದಿಸಿ ಆದ್ಯತೆ ಮೇರೆಗೆ ಕಾಮಗಾರಿ ನಿರ್ವಹಿಸಲಾಗುವುದು. | ಎಂ.ಕೆ. ಸುರೇಶ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net