

ಬೆಂಗಳೂರು: ರಾಜ್ಯದ ವಿವಿಧ ಮಹಾನಗರಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಕಾಲಕ್ಕೆ ವೇತನ ಪಾವತಿ, ಸರ್ಕಾರಿ ನೌಕರರಿಗೆ ಇರುವಂತೆ ಜಿಪಿಎಫ್ ಸೌಲಭ್ಯ ಸೇರಿ ಕೆಲ ಬೇಡಿಕೆಗಳನ್ನು ಈಡೇರಿಸಲು ಭರವಸೆ ದೊರೆತಿರುವ ಹಿನ್ನೆಲೆ, ಮುಷ್ಕರವನ್ನು ಸಂಪೂರ್ಣವಾಗಿ ಕೈಬಿಡಲು ಪಾಲಿಕೆ ನೌಕರರ ಸಂಘ ನಿರ್ಧರಿಸಿದೆ.
ವಿಕಾಸಸೌಧದಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ನಡೆದ ಮಹಾನಗರ ಪಾಲಿಕೆಗಳ ನೌಕರರ ಸಂಘ ಹಾಗೂ ಹಿರಿಯ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಒಟ್ಟು 11 ಬೇಡಿಕೆಗಳಲ್ಲಿ 7ಅನ್ನು ಈಡೇರಿಸಲು ಸ್ಪಷ್ಟ ಭರವಸೆ ನೀಡಲಾಯಿತು.
ಸಭೆ ಬಳಿಕ ಮಾಹಿತಿ ನೀಡಿದ ಸಚಿವರು, ಪಾಲಿಕೆ ನೌಕರರಿಗೆ ಸಕಾಲಕ್ಕೆ ವೇತನ ಪಾವತಿಸಲಾಗುವುದು, ವೃಂದ ಹಾಗೂ ನೇಮಕ ನಿಯಮಾವಳಿ ತಿದ್ದುಪಡಿ ತರುವ ಬಗ್ಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಪರಿಸರ ಇಂಜಿನಿಯರ್ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ನೌಕರರಿಗೂ ಗುಂಪು ವಿಮೆ ಯೋಜನೆ (ಜಿಐಎಸ್) ಜಾರಿಗೆ ತರಲು ಸರ್ಕಾರ ಮುಕ್ತ ಮುನಸ್ಸು ಹೊಂದಿದೆ ಎಂದು ತಿಳಿಸಿದರು.
ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆಯನ್ನು ಪಾಲಿಕೆ ನೌಕರರಿಗೆ ವಿಸ್ತರಿಸಲು ಸಹಮತ ವ್ಯಕ್ತಪಡಿಸಲಾಗಿದೆ. ನೌಕರರು ತಮ್ಮ ಪಾಲಿನ ವಿಮಾ ಮೊತ್ತ ಹಾಗೂ ಅದಕ್ಕೆ ಸಮನಾದ ಮೊತ್ತವನ್ನು ಪಾಲಿಕೆಗಳು ಭರಿಸುವ ಬಗ್ಗೆ ಪರಿಶೀಲಿಸಲಾಗುವುದು. ಜತೆಗೆ ನೌಕರರ ಚಿಕಿತ್ಸಾ ವೆಚ್ಚವನ್ನು ಮಂಜೂರು ಮಾಡುವ ಅಧಿಕಾರವನ್ನು ಆಯಾ ಪಾಲಿಕೆ ಆಯುಕ್ತರಿಗೆ ನೀಡಲಾಗುವುದು ಎಂದು ಸಚಿವ ಬೈರತಿ ಸುರೇಶ್ ವಿವರಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿ ದೀಪಾ ಚೋಳನ್, ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎ.ಅಮೃತರಾಜ್ ಹಾಗೂ ಇತರರು ಹಾಜರಿದ್ದರು.
ರಾಜ್ಯದ ವಿವಿಧ ಪಾಲಿಕೆಗಳ ನೌಕರರ ಸಂಘ ಮುಂದಿಟ್ಟಿದ 11 ಬೇಡಿಕೆಗಳಲ್ಲಿ 7ಅನ್ನು ಈಡೇರಿಸಲು ಸಚಿವರ ನೇತೃತ್ವದ ಸಭೆಯಲ್ಲಿ ಭರವಸೆ ಸಿಕ್ಕಿದೆ. ಇನ್ನೂ ಕೆಲವನ್ನು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಆಶ್ವಾಸನೆ ದೊರೆತಿದೆ. ಹೀಗಾಗಿ ಸಂಘ ಕೈಗೊಂಡಿದ್ದ ಮುಷ್ಕರನ್ನು ವಾಪಸ್ ಪಡೆಯಲಾಗಿದೆ. ಬೇಡಿಕೆ ಈಡೇರಿಸಿದ್ದಕ್ಕೆ ಸಚಿವರು, ಅಧಿಕಾರಿಗಳಿಗೆ ಧನ್ಯವಾದಗಳು.
- ಎ.ಅಮೃತರಾಜ್, ಕರ್ನಾಟಕ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ