

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕವನ್ನು ಕಡೆಗಣಿಸಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟಿಸಿತು.
ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಅಂಬೇಡ್ಕರ್ ವೃತ್ತದವರೆಗೂ ಖಾಲಿ ಚೊಂಬು ಹಿಡಿದು ಕಾಲ್ನಡಿಗೆಯಲ್ಲಿ ಸಾಗಿದ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೇಂದ್ರದ ಧಿಕ್ಕಾರಗಳನ್ನು ಕೂಗಿದರು.
ಅಧಿಕಾರ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ತಾರತಮ್ಯದ ಬಜೆಟ್ ಮಂಡಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಟ್ಟ ಕರ್ನಾಟಕಕ್ಕೆ ಆದ್ಯತೆಯೇ ಸಿಕ್ಕಿಲ್ಲ. ಇಲ್ಲಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಿರ್ಮಲಾ ಸೀತರಾಮನ್ ಕೂಡ ಏನು ಕೊಟ್ಟಿಲ್ಲ. ರಾಜ್ಯದ ಸಂಸದರು ಸಹ ಒತ್ತಡ ಹೇರುವಲ್ಲಿ ವಿಲರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಆರೋಪಿಸಿದರು.
ಮಹತ್ತರವಾದ ಮೇಕೆದಾಟು ಯೋಜನೆ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಅನುದಾನ ಅಗತ್ಯವಿರುವುದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಬಜೆಟ್ ಮಂಡನೆಗೆ ಮೊದಲೇ ಕೇಂದ್ರದ ಗಮನ ಸೆಳೆದಿತ್ತು. ಆದರೆ, ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಮಲತಾಯಿ ಧೋರಣೆ ತೋರಲಾಗಿದೆ ಎಂದು ಕಿಡಿಕಾರಿದರು.
ಈಗಾಗಲೇ ಬಿಜೆಪಿಯ ಕುತಂತ್ರ ಧರ್ಮಾಧಾರಿತ, ಸರ್ವಾಧಿಕಾರಿ ರಾಜಕಾರಣದ ಬಗ್ಗೆ ಬಹುತೇಕ ಜನರಿಗೆ ಅರಿವಾಗಿದೆ. ಇದಕ್ಕೆ ಚುನಾವಣೆಯಲ್ಲಿ ಉತ್ತರ ನೀಡುತ್ತಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಪಾಠ ಕಲಿಸಲಿದ್ದಾರೆ. ಇದೇ ವೇಳೆ ಕೇಂದ್ರದ ಜನ ವಿರೋಧಿ ಆಡಳಿತದ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸಬೇಕಾಗಿದೆ ಎಂದರು.
ಮೊದಲಿನಿಂದಲೂ ಕರ್ನಾಟಕದ ಬಗೆಗಿನ ಕೇಂದ್ರ ಎನ್‌ಡಿಎ ಸರ್ಕಾರ ಅನಾದರ ಪ್ರದರ್ಶನ ತೋರುತ್ತಿದೆ. ಅಭಿವೃದ್ಧಿ ಮತ್ತು ಜನಪರ ಗಂಭೀರ ಸಮಸ್ಯೆಗಳನ್ನು ಬದಿಗೊತ್ತಿ, ಒಡೆದು ಆಳುವ ನೀತಿಯ ರಾಜಕಾರಣದ ಮೂಲಕ ಅಮಾಯಕರ ದಿಕ್ಕು ತಪ್ಪಿಸಲಾಗುತ್ತಿದೆ. ರೈತರು, ಕಾರ್ಮಿಕರ ವಿರುದ್ಧದ ಮಾರಕ ನೀತಿಗಳನ್ನು ಮಾತ್ರ ಜಾರಿಗೆ ತರುವಲ್ಲಿ ನಿರತರಾಗಿದೆ ಎಂದು ಡಾ. ಎಂ.ಸಿ. ಸುಧಾಕರ್ ಕಿಡಿಕಾರಿದರು.
ರಾಜ್ಯದ ಅಭಿವೃದ್ಧಿಗೆ ಸ್ಪಂದನೆ ಇಲ್ಲ
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೊದಲಿನಿಂದಲೂ ಉದ್ಯಮಿಗಳ ಪರ ನೀತಿ ರೂಪಿಸಿ, ಜನವಿರೋಧಿ ಆಡಳಿತ ನಡೆಸುತ್ತಿದೆ. ಕರ್ನಾಟಕದ ಅಭಿವೃದ್ಧಿಗಂತೂ ಸ್ಪಂದಿಸುತ್ತಿಲ್ಲ. ಆಂಧ್ರಪ್ರದೇಶ, ಬಿಹಾರ, ಗುಜರಾತಿಗೆ ಮಾತ್ರ ಕೋಟ್ಯಂತರ ವೆಚ್ಚದ ಹೊಸ ಯೋಜನೆಗಳು ಮತ್ತು ವಿಶೇಷ ಪ್ಯಾಕೇಜುಗಳನ್ನು ೋಷಿಸುತ್ತಿದೆ. ಇದು ದೊಡ್ಡ ಅನ್ಯಾಯ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ, ಕುಪೇಂದ್ರರೆಡ್ಡಿ, ಮಂಗಳ ಪ್ರಕಾಶ್, ಚಂದ್ರಶೇಖರ್, ಆದಿನಾರಾಯಣ್ ಮತ್ತಿತರರು ಭಾಗವಹಿಸಿದ್ದರು.
ಮಂಚೇನಹಳ್ಳಿಯಲ್ಲಿ ಜಾಗ ಎಲ್ಲಿ?
ಕೈಗಾರಿಕಾಭಿವೃದ್ಧಿಯ ಪ್ರಗತಿದಾಯಕ ಕೆಲಸಗಳಿಗೆ ದುರುದ್ದೇಶದಿಂದ ಸಂಸದರು ಅಡ್ಡಿಪಡಿಸುತ್ತಿದ್ದಾರೆ. ಹೋರಾಟಗಳ ಮೂಲಕ ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಮಂಚೇನಹಳ್ಳಿಯಲ್ಲಿ 2 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿರುವುದರ ಬಗ್ಗೆ ಅವರೇ ಹೇಳಿಕೆ ನೀಡಿದ್ದರು. ಆದರೆ, ಆ ಜಾಗ ಎಲ್ಲಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ, ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಕೀಳು ರಾಜಕಾರಣ ಮಾಡುವುದನ್ನು ಬಿಡಲಿ, ಅವರು ಶಾಸಕರಾಗಿದ್ದ 10 ವರ್ಷಗಳ ಅವಧಿಯಲ್ಲಿ ಏನೇನು ಕೆಲಸ ಮಾಡಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಲಾದರೂ ಸಂಸದರಾಗಿ ಕೇಂದ್ರದಿಂದ ಈ ಭಾಗಕ್ಕೆ ಹೊಸ ಯೋಜನೆಗಳನ್ನು ತರುವ ಕೆಲಸವನ್ನು ಮಾಡಲಿ ಎಂದು ಸಚಿವ ಡಾ ಎಂ.ಸಿ. ಸುಧಾಕರ್ ಆಗ್ರಹಿಸಿದರು.
.