ಕಾಫಿ ತೋಟ ಕಾರ್ಮಿಕರ ಕಡೆಗಣನೆ

Published on

ಸೋಮವಾರಪೇಟೆ: ಅಂತಾರಾಷ್ಟ್ರೀಯ ಕಾಫಿ ಸಮ್ಮೇಳನದಲ್ಲಿ ಪ್ರಮುಖ ಉತ್ಪಾದನಾ ಶಕ್ತಿಯಾಗಿರುವ ಕಾಫಿ ತೋಟ ಕಾರ್ಮಿಕರನ್ನು ಕಡೆಗಣಿಸಿದ್ದು, ಇದನ್ನು ಖಂಡಿಸಿ ಸೆ.25ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಕಾಫಿ ತೋಟ ಕಾರ್ಮಿಕರ ಸಮಾವೇಶದಲ್ಲಿ ಕೊಡಗಿನಿಂದನೂ ಭಾಗವಹಿಸಲಿದ್ದಾರೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಚ್.ಇ.ಸಣ್ಣಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಸೆ.25ರಿಂದ 28ರವರೆಗೆ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ-ಸಮ್ಮೇಳನದಲ್ಲಿ ಬಹುಮುಖ್ಯವಾಗಿ ಉತ್ಪಾದನಾ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಮ್ಮೇಳನದಲ್ಲಿ ಕಾಫಿ ತೋಟ ಕಾರ್ಮಿಕರ ಸಮಸ್ಯೆಗಳ ನಿವಾರಣೆ, ಸೌಲಭ್ಯಗಳನ್ನು ಕಲ್ಪಿಸುವುದು, ಕಾಯ್ದೆಗಳ ಜಾರಿ, ಮೂಲ ಸೌಕರ್ಯ, ಭದ್ರತೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಯಾವುದೇ ಅಜೆಂಡಾ ಇಲ್ಲ. ಕೇವಲ ಕಾರ್ಪೋರೇಟ್ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲೆನಾಡಿನಲ್ಲಿ 57 ಲಕ್ಷಕ್ಕೂ ಅಧಿಕ ಕಾಫಿ ತೋಟ ಕಾರ್ಮಿಕರಿದ್ದಾರೆ. ಇದರಲ್ಲಿ ಶೇ.60ರಷ್ಟು ಮಹಿಳೆಯರಿದ್ದಾರೆ. ವಾರ್ಷಿಕ 2,19,500 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೆ ಕಾರ್ಮಿಕರು ಶಕ್ತಿಯಾಗಿದ್ದಾರೆ. ಆದರೂ, ಶೇ. 80ರಷ್ಟು ಕಾರ್ಮಿಕರಿಗೆ ಯಾವುದೇ ಕಾನೂನು ರಕ್ಷಣೆ, ಮೂಲ ಸೌಕರ್ಯಗಳಿಲ್ಲ. ಇದರೊಂದಿಗೆ ಪ್ಲಾಂಟೇಷನ್ ಕಾರ್ಮಿಕ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ, ವಲಸೆ ಕಾರ್ಮಿಕ ಕಾಯ್ದೆ, ಬೋನಸ್, ಭವಿಷ್ಯ ನಿಧಿ, ಆರೋಗ್ಯ ವಿಮೆ ಸೇರಿದಂತೆ ಇತರ ಯೋಜನೆಗಳನ್ನು ಈವರೆಗೆ ಜಾರಿಗೆ ತಂದಿಲ್ಲ ಎಂದು ದೂರಿದರು.

ಇಷ್ಟೆಲ್ಲ ಸಮಸ್ಯೆಗಳನ್ನು ಪ್ರಮುಖ ಉತ್ಪಾದನಾ ಶಕ್ತಿಯಾಗಿರುವ ಕಾರ್ಮಿಕ ವರ್ಗ ಎದುರಿಸುತ್ತಿದ್ದರೂ ಅಂತಾರಾಷ್ಟ್ರೀಯ ಕಾಫಿ ಸಮ್ಮೇಳನದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಮಂಡಳಿ ಸೇರಿದಂತೆ ಸರ್ಕಾರ ಮುಂದಾಗಿಲ್ಲ. ಈ ನೀತಿಯನ್ನು ಖಂಡಿಸಿ 25ರಂದು ಕಾರ್ಮಿಕರ ಬೃಹತ್ ಸಮಾವೇಶ ಆಯೋಜನೆಗೊಂಡಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಎಸ್.ಆರ್.ಮಂಜುನಾಥ್, ಸಿಪಿಐಎಂಎಲ್‌ನ ಜಿಲ್ಲಾ ಸಮಿತಿಯ ಕೆ.ಟಿ.ಆನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net