

ಮದ್ದೂರು: ಬೀದಿ ನಾಯಿ ದಾಳಿ ವೇಳೆ ಗಾಯಗೊಂಡು ಚಿಕಿತ್ಸೆಗೆಂದು ಮಂಡ್ಯ ಜಿಲ್ಲಾಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಸಂಚಾರ ಪೊಲೀಸರ ವಾಹನ ತಪಾಸಣೆ ವೇಳೆ ಆಯಾತಪ್ಪಿ ಬಿದ್ದು ಮೃತಪಟ್ಟ ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ರಿತೀಕ್ಷಾ ನಿವಾಸಕ್ಕೆ ಶಾಸಕ ಕೆ.ಎಂ.ಉದಯ ಬುಧವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು.
ತಾಲೂಕಿನ ಗೊರವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಂ.ಉದಯ ಮೃತರ ಪಾಲಕರು ಮತ್ತು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಿದರು. ಬಳಿಕ ತಪ್ಪಿತಸ್ಥರ ವಿರುದ್ಧ ಅಗತ್ಯ ಶಿಸ್ತು ಕ್ರಮದ ಭರವಸೆ ನೀಡುವ ಜತೆಗೆ ವೈಯಕ್ತಿಕ ಪರಿಹಾರ ನೀಡಿದರು.
ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಕರ್ತವ್ಯನಿರತ ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಇದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಮೃತ ಬಾಲಕಿ ಪಾಲಕರು ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಕೆ.ಎಂ.ಉದಯ, ಕೆಲವರು ರಾಜಕೀಯ ದುರುದ್ದೇಶದಿಂದ ಶವಾಗಾರದಲ್ಲಿದ್ದ ಮಗುವಿನ ಶವ ತಂದು ಬೀದಿಗಿಳಿದು ಪ್ರತಿಭಟನೆ ಮಾಡಿರುವ ಬಿಜೆಪಿ ಕಾರ್ಯಕರ್ತರ, ಮುಖಂಡರ ಕ್ರಮ ಸರಿಯಲ್ಲ. ವ್ಯವಸ್ಥೆಯನ್ನು ಸರಿಪಡಿಸಲು ಕೈ ಜೋಡಿಸಬೇಕೇ ಹೊರತು ಇಂತಹ ಘಟನೆಗಳಿಗೆ ಮುಂದಾಗಬಾರದು ಎಂದರು.
ತಾಲೂಕು ಆಸ್ಪತ್ರೆಯಲ್ಲಿ ಹಾವು, ನಾಯಿ ಕಡಿತದ ಚುಚ್ಚುಮದ್ದು ಜತೆಗೆ ಕ್ರಿಮಿನಾಶಕ ಕುಡಿದು ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಮತ್ತು ಅಗತ್ಯ ಚುಚ್ಚು ಮದ್ದನ್ನು ಶೇಖರಣೆ ಮಾಡುವಂತೆ ಸಚಿವರು ಆದೇಶ ನೀಡಿದ್ದರೂ ಕೆಲ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದು ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವುದಾಗಿ ಹೇಳಿದರು.
ನಾಯಿ ಮತ್ತು ಹಾವು ಕಡಿತಕ್ಕೊಳಗಾದವರಿಗೆ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದು ಜತೆಗೆ ಕೆಲ ಅಧಿಕಾರಿಗಳು ಕಳೆದ ಹಲವಾರು ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿ ಜಿಡ್ಡು ಹಿಡಿದಿದ್ದು ಎಲ್ಲ ವ್ಯವಸ್ಥೆಯನ್ನು ಸರಿಪಡಿಸಲು ಹಂತ ಹಂತವಾಗಿ ಕ್ರಮ ವಹಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆ ಕ್ರಮಗಳನ್ನು ಅನುಸರಿಸಿ ಸಾರ್ವಜನಿಕರ ಸೇವೆಗೆ ಅನುಕೂಲ ಕಲ್ಪಿಸುವುದಾಗಿ ಹೇಳಿದರು.
ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಬಾಲಕೃಷ್ಣ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮತ್ತು ಟಿಎಚ್‌ಒ ಮೋಹನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕ್ರಮ ವಹಿಸಲು ತಿಳಿಸಿರುವುದಾಗಿ ಹೇಳಿದರು.
ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸದಸ್ಯರಾದ ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮಹಿಳಾ ಅಧ್ಯಕ್ಷೆ ಮಮತಾ ಶಂಕರೇಗೌಡ, ಬಿಇಒ ಧನಂಜಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ರಾಘವ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಧು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.