

ಬೆಂಗಳೂರು:ನೆರೆಯ ರಾಜ್ಯಗಳು ಒಡ್ಡುತ್ತಿರುವ ಸವಾಲಿನ ನಡುವೆಯೂ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಹೊಸ ಉದ್ದಿಮೆಗಳ ಸ್ಥಾಪನೆಗೆ ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದು ಗೃಹಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ( ಎಫ್ಕೆಸಿಸಿಐ) ಗುರುವಾರ ನಗರದಲ್ಲಿ ಆಯೋಜಿಸಲಾಗಿದ್ದ "ಎಫ್ಕೆಸಿಸಿಐ ಸಂಸ್ಥಾಪಕರ' ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದ ಆರ್ಥಿಕ, ಕೈಗಾರಿಕಾ ಭೂಪಟದಲ್ಲಿ ನಮ್ಮ ದೇಶ ಮತ್ತು ರಾಜ್ಯವು ತಮ್ಮದೇ ಆದ ವಿಶೇಷ ಸ್ಥಾನ ಪಡೆದುಕೊಂಡಿವೆ. ತೃತೀಯ ಹಂತದ ದೇಶಗಳಲ್ಲಿ ಗುರುತಿಸಲ್ಪಡುತ್ತಿದ್ದ ಭಾರತ, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ 3ನೇ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದೆ. ದೇಶದಲ್ಲಿ ಸಿಗುವಂತಹ ಉತ್ತಮ ಕೌಶಲ ಹೊಂದಿರುವ ಮಾನವ ಸಂಪನ್ಮೂಲ ಬೇರೆ ಯಾವುದೇ ದೇಶದಲ್ಲೂ ದೊರೆಯುವುದಿಲ್ಲ. ಅದರಲ್ಲೂ ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ದಿಗೆ ನೀಡುತ್ತಿರುವ ಕೊಡುಗೆ ಅಪಾರ. ಎಫ್ಕೆಸಿಸಿಐ ಸಂಸ್ಥೆ ಸ್ಥಾಪಿಸುವ ಮೂಲಕ ಸರ್.ಎಂ.ವಿಶ್ವೇಶ್ವರಯ್ಯ ಉತ್ತಮ ಬುನಾದಿಯನ್ನು ಹಾಕಿಕೊಟ್ಟರು ಎಂದು ಶ್ಲಾಘಿಸಿದರು.
ಕೈಗಾರಿಕಾ ರಂಗದಲ್ಲಿ ರಾಜ್ಯವು ವೇಗವಾಗಿ ಬೆಳೆಯುತ್ತಿದೆ. ದೇಶದ ಶೇ.50ರಷ್ಟು ಸಾಫ್ಟೇವರ್ ಬೆಂಗಳೂರಿನಲ್ಲಿ ತಯಾರಾಗುತ್ತದೆ.ಯಾವುದೇ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಇದು ವಿಶ್ವೇಶ್ವರಯ್ಯ ಅವರ ದೂರದೃಷ್ಟಿ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹರಾಷ್ಟ್ರದಂತಹ ರಾಜ್ಯಗಳು ನೀಡುತ್ತಿರುವ ಸವಾಲನ್ನು ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವಾಗಲೂ ಸಿದ್ಧವಾಗಿದೆ. ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಾಣವಾಗುತ್ತಿದೆ. 20 ಸಾವಿರ ಏಕರೆಗಳ ಕೈಗಾರಿಕಾ ಭೂಮಿ ಸಿದ್ಧವಾಗಿದೆ. ಎಚ್ಎಎಲ್ ನಂತಹ ಪ್ರಮುಖ ಕೈಗಾರಿಕೆಗಳು ಸ್ಥಾಪನೆಯಾಗಿವೆ ಎಂದು ಸಚಿವರು ಹೇಳಿದರು.
ಭಾಗ್ಯಲಕ್ಷ್ಮೀ ಸಮೂಹ ಸಂಸ್ಥೆಗಳ ಮುಖ್ಯ ಪ್ರವರ್ತಕ ಬಿ.ಎ.ಶ್ರೀನಿವಾಸ ಗುಪ್ತ ದಂಪತಿಗೆ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಮೆಮೋರಿಯಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಎಫ್ಕೆಸಿಸಿಐ ಅಧ್ಯ ರಮೇಶ್ ಚಂದ್ರ ಲಹೋಟಿ, ಹಿರಿಯ ಉಪಾಧ್ಯಕ್ಷ ಉಮಾ ರೆಡ್ಡಿ ಸೇರಿ ಮತ್ತಿತರರಿದ್ದರು.