

ಗುರುಪುರ: ಮಾವೋವಾದಿ ಎಡಚಿಂತನೆ ಮೈಗೂಡಿಸಿಕೊಂಡು, ಬಡವರಿಗೆ ನ್ಯಾಯ ಒದಗಿಸಿ ಕೊಡುವ ನೆಪವೊಡ್ಡಿ, ಕಾನೂನು ಧಿಕ್ಕರಿಸಿ ಕಾಡಿನಲ್ಲಿ ಉಳಿದುಕೊಂಡು ಗೆರಿಲ್ಲಾ ಯುದ್ಧ ನಡೆಸುತ್ತಿರುವ ನಕ್ಸಲರಿಗೆ ತಪ್ಪಿನ ಅರಿವಾಗಿದ್ದರೆ, ನ್ಯಾಯಾಲಯದ ಮುಂದೆ ಹಾಜರಾಗಲು ಸರ್ಕಾರ ಅವರಿಗೆ ಸೂಚಿಸಬೇಕು. ಬದಲಾಗಿ ನಕ್ಸಲರಿಗೆ ಹಣದ ಆಮಿಷವೊಡ್ಡಿರುವುದು ಸರ್ಕಾರ ತಪ್ಪು ನಿರ್ಧಾರ ಎಂದು ಶಾಸಕ ಡಾ.ಭರತ್ ಶೆಟ್ಟಿ ಟೀಕಿಸಿದರು.
ಸುರತ್ಕಲ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪೊಲೀಸರು ನಕ್ಸಲರ ಸಂಪೂರ್ಣ ನಿರ್ಮೂಲನೆಯತ್ತ ಹೆಜ್ಜೆ ಇಟ್ಟಿರುವ ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿದು ನಕ್ಸಲರಿಗೆ ರಾಜ ಮರ್ಯಾದೆ ನೀಡುತ್ತಿದೆ ಎಂದು ಆರೋಪಿಸಿದರು.
ಕಾನೂನು, ನ್ಯಾಯಾಲಯಕ್ಕೆ ಗೌರವ ನೀಡಿ ಶರಣಾಗುವ ಬದಲಾಗಿ ಸರ್ಕಾರಕ್ಕೆ ತಮ್ಮ ಬೆದರಿಕೆಯ ಬೇಡಿಕೆ ಮುಂದಿಟ್ಟು ನಕ್ಸಲರು ಶರಣಾಗಿದ್ದಾರೆ. ಇದು ನಕ್ಸಲರ ತಂತ್ರಗಾರಿಕೆ ಎಂದ ಅವರು, ಸರ್ಕಾರ ನೀಡುವ ಶರಣಾಗತಿ ಪ್ಯಾಕೇಜ್ ಭವಿಷ್ಯದಲ್ಲಿ ನಗರದಲ್ಲಿ ಹೊಸ ಆಂದೋಲನ ನಡೆಸಲು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುತ್ತದೆಯೇ ಎಂದು ಪ್ರಶ್ನಿಸಿದರು.
ದೇಶದ ಕಾನೂನಿಗೆ ಗೌರವ ನೀಡಿ ನಿಶಸವಾಗಿ ಬಂದು ಶರಣಾಗಿ ಇತರರಂತೆ ಸಾಮಾನ್ಯ ಜೀವನ ನಡೆಸಲು ಮುಂದಾದಲ್ಲಿ ಮಾನವೀಯ ನೆಲೆಯಲ್ಲಿ ನೆರವು ನೀಡುವುದರಲ್ಲಿ ತಪ್ಪಿಲ್ಲ. ಆದರೆ ಸಿದ್ದರಾಮಯ್ಯ ಅವರು ನಕ್ಸಲರ ಎಲ್ಲ ಷರತ್ತು ಒಪ್ಪಿ ಎಡಚಿಂತನೆಗೆ ಶರಣಾಗಿರುವಂತೆ ಕಾಣುತ್ತಿದೆ. ಪ್ರಸಕ್ತ ಬೆಳವಣಿಗೆಯಿಂದ ಬೃಹತ್ ಪ್ಯಾಕೇಜ್ ಪಡೆಯಲು ಕ್ರಿಮಿನಲ್ ಚಟುವಟಿಕೆ ನಡೆಸುವ ಇತರ ತಂಡಗಳು ಶರಣಾಗತಿ ಬೇಡಿಕೆ ಇಡುವ ಸಾಧ್ಯತೆ ಹೆಚ್ಚಿದೆ ಎಂದರು.