ಕುಂದೂರು ಮಠದಲ್ಲಿ ನವರಾತ್ರಿ ಉತ್ಸವಕ್ಕೆ ತೆರೆ

12 CRP-1A
ಚನ್ನರಾಯಪಟ್ಟಣ ತಾಲೂಕು ಕುಂದೂರು ಮಠದಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬನ್ನಿ ಕಡಿದರು.
Published on

ಚನ್ನರಾಯಪಟ್ಟಣ: ತಾಲೂಕಿನ ಕುಂದೂರು ಮಠದಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನೂರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಕಡಿದು ವಿಜಯದಶಮಿ ಆಚರಣೆ ಮಾಡಿದರು.

ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರುಮಠದಲ್ಲಿ ಆಚರಿಸಲಾಗುವ ನವರಾತ್ರಿ ಉತ್ಸವಕ್ಕೆ ವಿಜಯದಶಮಿ ಶುಭ ದಿನವಾದ ಶನಿವಾರ ಸ್ವಾಮೀಜಿ ಬನ್ನಿ ಕಡಿದು ನವರಾತ್ರಿ ಉತ್ಸವಕ್ಕೆ ತೆರೆ ಎಳೆದರು.

ಇದು ಬಹು ವರ್ಷಗಳಿಂದ ನಡೆದ ಬಂದ ಪ್ರತೀತಿ. ಮಠದ ಪಟ್ಟದ ಕುದುರೆ, ಹಸುವಿನೊಂದಿಗೆ ಕ್ಷೇತ್ರದ ಸುಬ್ರಹ್ಮಣ್ಯ ದೇವಸ್ಥಾನದಿಂದ ಕ್ಷೇತ್ರದ ಅಧಿದೇವತೆಗಳಾದ ರಂಗನಾಥಸ್ವಾಮಿ ಮತ್ತು ಮೆಳಿಯಮ್ಮನನ್ನು ಅಡ್ಡೆಯಲ್ಲಿ ನಾದಸ್ವರದೊಂದಿಗೆ ಹೊರವಲಯದಲ್ಲಿನ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಆವರಣಕ್ಕೆ ಕರೆತಂದು ಬನ್ನಿ ಮರದ ಮುಂಭಾಗದಲ್ಲಿ ಹಾಕಲಾಗಿದ್ದ ಮಂಟಪದಲ್ಲಿ ಇರಿಸಲಾಯಿತು.

ಬೆಳಗ್ಗೆ 11.30ಕ್ಕೆ ಆಗಮಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭಕ್ತರು ಪೂರ್ಣಕುಂಭ ಕಳಸದೊಂದಿಗೆ ಸ್ವಾಗತಿಸಲಾಯಿತು. ನಂತರ ಶ್ರೀಗಳು ವೀರಭದ್ರೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ಶ್ರೀಮಠದ ಪದ್ಧತಿಯಂತೆ ಅವರಿಗೆ ಬೆಳ್ಳಿ ಕಿರೀಟ, ವಿಶೇಷ ಆಭರಣ ತೊಟ್ಟ ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ನಾದಸ್ವರದೊಂದಿಗೆ ಕರೆತರಲಾಯಿತು. ಬನ್ನಿಮಂಟಪದಲ್ಲಿರಿಸಿದ್ದ ರಂಗನಾಥಸ್ವಾಮಿ, ಮೆಳಿಯಮ್ಮ ದೇವಿಗೆ ಮಹಾಮಂಗಳಾರತಿ ನೆರವೇರಿಸಿ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮರವನ್ನು ಮೂರು ಸುತ್ತು ಪ್ರದಕ್ಷಿಣೆ ಸುತ್ತಿದ ನಂತರ ಕತ್ತಿಯಿಂದ ಬನ್ನಿ ಕಡಿದರು. ಈ ಸಂದರ್ಭ ನೆರೆದಿದ್ದ ನೂರಾರು ಭಕ್ತರು ಜೈಕಾರದ ಘೋಷ ಕೂಗಿದರು.

ಈ ವೇಳೆ ಆಶೀರ್ವಚನ ನೀಡಿದ ನಿರ್ಮಲಾನಂದನಾಥ ಶ್ರೀಗಳು, ಎಲ್ಲ ದೋಷಗಳನ್ನು ಹೋಗಲಾಡಿಸುವ ಉದ್ದೇಶದಿಂದ 9ದಿನಗಳು ದೇವಿಯನ್ನು ಆರಾಧಿಸಿ ಸಾಧನೆಗೈದ ಭಕ್ತರು 10ದಿನ ತಮ್ಮ ಅಂತರಂಗ ಶುದ್ಧಿಯನ್ನು ಜಯಿಸುವ ದಿನ ವಿಜಯದಶಮಿ. ವಿಜಯದಶಮಿಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಹಿಷಾಸುರನನ್ನು ಮರ್ದಿಸಿದ ಭಗವತಿಯು ಜಗತ್ತಿನ ಎಲ್ಲರ ಅಂತರಂಗ ಮತ್ತು ಸಮಾಜದ ದೋಷವನ್ನು ಹೋಗಲಾಡಿಸಿ, ಆತ್ಮಸಾಕ್ಷತ್ಕಾರವನ್ನು ಪಡೆದುಕೊಳ್ಳುವ ದಿನವನ್ನು ತಾಯಿ ಚಾಮುಂಡಿ ಕರುಣಿಸಿ, ಮಳೆ ಬೆಳೆ ಸಂತೃಪ್ತಿಯಾಗಿ ನಾಡಿನ ರಕ್ಷಣೆಯಾಗಲಿ ಎಂದು ಪ್ರಾರ್ಥಿಸಿ, ಎಲ್ಲೆಡೆ ಶಾಂತಿ ನೆಮ್ಮದಿಯನ್ನು ತಂದು ಸರ್ವರ ಏಳಿಗೆಗೆ ಈ ವಿಜಯದಶಮಿ ಕಾರಣವಾಗಲಿ ಎಂದು ಆಶಿಸಿದರು.
ಹಾಸನ, ಕೊಡಗು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಚೈತನ್ಯನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್.ಅಶೋಕ್, ಹಾಗೂ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net