

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವರಿಗೆ ಬ್ರಹ್ಮಕುಂಭಾಭಿಷೇಕ ಹಾಗೂ ನೂತನ ಬ್ರಹ್ಮರಥ ಸಮರ್ಪಣೆ ಶುಕ್ರವಾರ ಮಧ್ಯಾಹ್ನ ನೆರವೇರಿತು.
ಎಡಪದವು ನಾರಾಯಣ ತಂತ್ರಿಗಳ ನೇತೃತ್ವ ದೇವಳ ಪ್ರಧಾನ ಅರ್ಚಕ ಸುದರ್ಶನ್ ಬಲ್ಲಾಳ್ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನಡೆದು, ಬಳಿಕ ಶ್ರೀ ಗೋಪಾಲಕೃಷ್ಣ ಮತ್ತು ಪರಿವಾರ ದೇವರಿಗೆ ಬ್ರಹ್ಮಕುಂಭಾಭಿಷೇಕ ಹಾಗೂ ನೂತನ ಬ್ರಹ್ಮರಥ ಸಮರ್ಪಣೆ ನೆರವೇರಿತು.
ಶಾಸಕ ರಾಜೇಶ್ ನೈಾಕ್ ಉಳಿಪಾಡಿ, ದೇವಳ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ಗೌರವಾಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಕಾರ್ಯಾಧ್ಯಕ್ಷ ಸೀತಾರಾಮ್ ಸಾಲಿಯಾನ್ ಅಗ್ರಹಾರ್, ಕಾರ್ಯದರ್ಶಿ ಸದಾನಂದ ಗೌಡ ನಾವೂರು, ನಾವೂರು ಗ್ರಾಪಂ ಅಧ್ಯಕ್ಷೆ ಇಂದಿರಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಕಾರ್ಯದರ್ಶಿ ಉಮಾಶಂಕರ ಬಂಟ್ವಾಳ, ಗೌರವ ಸಲಹೆಗಾರ ಮುರಳೀಧರ ಭಟ್, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ನೃತ್ಯವೈವಿಧ್ಯ ಹಾಗೂ ನೃತ್ಯರೂಪಕ ನಡೆಯಿತು. ರಾತ್ರಿ ದೇವರಿಗೆ ರಂಗಪೂಜೆ ಹಾಗೂ ಸಾಂಪ್ರದಾಯಿಕವಾಗಿ ರಥಬೀದಿಯಲ್ಲಿ ನೂತನ ಬ್ರಹ್ಮರಥವನ್ನು ಎಳೆಯಲಾಯಿತು.