

ಮದ್ದೂರು: ನವೋದಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ಮಕ್ಕಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನವೋದಯ ಶಾಲೆಗೆ ಬರುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾ ಮನೋಭಾವ ಹೆಚ್ಚುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.
ತಾಲೂಕಿನ ಶಿವಾರ ಗುಡ್ಡದಲ್ಲಿರುವ ಪಿ.ಎಂ.ಶ್ರೀ ಜವಾಹರ ನವೋದಯ ವಿದ್ಯಾಲಯ ಸಮಿತಿಯ ಆವರಣದಲ್ಲಿ ಇತ್ತೀಚೆಗೆ 7ನೇ ವರ್ಷದ ಪ್ರಾದೇಶಿಕ ವಿಭಾಗ ಮಟ್ಟದ ಕ್ರೀಡಾಕೂಟ (ರೋಪ್ ಸ್ಕಿಪ್ಪಿಂಗ್) ಉದ್ಘಾಟನೆ ನೆರವೇರಿಸಿ ಮಾತನಾಡಿ, ನವೋದಯದಲ್ಲಿ ಕಲಿತ ಮಕ್ಕಳು ಉತ್ತಮ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಸ್ತಿಗೆ ಇನ್ನೊಂದು ಹೆಸರೇ ನವೋದಯ ಶಾಲೆ. ನವೋದಯ ಶಿಕ್ಷಣ ವ್ಯವಸ್ಥೆಯ ಶಕ್ತಿಗಳನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ ಇದು ಶಿಕ್ಷಣದ ಇತ್ತೀಚಿನ ತಂತ್ರಜ್ಞಾನಗಳಿಗೆ ಉತ್ತಮ ಪರಿಚಯವನ್ನು ಒದಗಿಸುತ್ತದೆ ಎಂದರು.
ಮಾನವ ಜೀವನದಲ್ಲಿ ಎದುರಾಗುವ ನೈಜ ಸಮಸ್ಯೆಗಳನ್ನು ಪರಿಹರಿಸಲು ಪಠ್ಯಪುಸ್ತಕದಿಂದ ಕಲಿಯುವ ವಿಷಯಗಳೇ ಎಲ್ಲರಿಗೂ ಉಪಯೋಗವಾಗುವುದಿಲ್ಲ. ಅದಕ್ಕಿಂತ, ವ್ಯಕ್ತಿಯ ಜ್ಞಾನ ಹಾಗೂ ಪ್ರಾಯೋಗಿಕ ಚಿಂತನೆ (ಪ್ರ್ಯಾಕ್ಟಿಕಲ್ ಮೈಂಡ್‌ಸೆಟ್) ಅವಶ್ಯಕವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಭ್ಯಾಸದ ಜತೆಗೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ, ಕ್ರೀಡೆಯಿಂದ ಅದೆಷ್ಟೋ ಜನ ಬದುಕು ಕಟ್ಟಿಕೊಂಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಾ ಮನೋಭಾವನೆಯಿಂದ ಭಾಗವಹಿಸಲು ಸಾಧ್ಯ, ವಿದ್ಯಾರ್ಥಿಗಳೆಲ್ಲ ನಿರ್ದಿಷ್ಟ ಗುರಿ ಇಟ್ಟುಕೊಂಡು ನಡೆದರೆ ಸಮಾಜದಲ್ಲಿ ಉನ್ನತ ಹುದ್ದೆಯ ಅಲಂಕರಿಸಬಹುದಾಗಿದೆ ಎಂದರು.
ಈ ಬಾರಿ ಐಎಎಸ್ ಪರೀಕ್ಷೆಯಲ್ಲಿ 135ಕ್ಕೂ ಹೆಚ್ಚು ನವೋದಯ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಾನು ಸಹ ನನ್ನ ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾಪಟುವಾಗಿದೆ, ನಿಮ್ಮ ಪ್ರತಿಭೆ ತಕ್ಕಂತೆ ನಿಮ್ಮ ಬದುಕುಗಳನ್ನು ಕಟ್ಟಿಕೊಳ್ಳಿ ಎಂದು ಹೇಳಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರದ ತರಬೇತುದಾರ ಸೋಮಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಪ್ರಸಾದ್, ಪ್ರಾಂಶುಪಾಲ ಪಾರ್ಥಿಬನ್, ಉಪಪ್ರಾಂಶುಪಾಲ ಸತ್ಯಲಿಂಗಂ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮ ಇದ್ದರು.