ಜಿಲ್ಲಾಡಳಿತ ದಸರಾ ಧಿಕ್ಕರಿಸಿ ನವರಾತ್ರಿ ಉತ್ಸವ ಆಚರಣೆಗೆ ಚಾಲನೆ

Navaratri_Utsava
Published on

ತುಮಕೂರು: ಜಿಲ್ಲಾಡಳಿತದ ತುಮಕೂರು ದಸರಾ ಉತ್ಸವವನ್ನು ತುಮಕೂರು ದಸರಾ ಉತ್ಸವ ಸಮಿತಿ ಧಿಕ್ಕರಿಸಿ ಪ್ರತ್ಯೇಕ ದಸರಾ ಆಚರಣೆ ಕೈಗೊಂಡಿದೆ.

ಕಳೆದ 33 ವರ್ಷಗಳಿಂದ ನಗರದಲ್ಲಿ ಸಂಪ್ರದಾಯಬದ್ಧ ದಸರಾ ಉತ್ಸವ ಆಚರಿಸಿಕೊಂಡು ಬಂದಿರುವ ತುಮಕೂರು ದಸರಾ ಸಮಿತಿ ಪ್ರತ್ಯೇಕವಾಗಿ ಕೆ.ಆರ್​.ಬಡಾವಣೆಯ ಶ್ರೀ ರಾಮಮಂದಿರದಲ್ಲಿ ಹಮ್ಮಿಕೊಂಡಿರುವ ನವರಾತ್ರಿ ಉತ್ಸವಕ್ಕೆ ಗುರುವಾರ ಸಂಜೆ ಎಲೆರಾಂಪುರದ ಕುಂಚಿಟಿಗರ ಸಂಸ್ಥಾನ ಪೀಠದ ಹನುಮಂತನಾಥ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶ್ರೀಗಳು, ಹಬ್ಬ, ಜಾತ್ರೆಗಳು, ಧಾರ್ಮಿಕ ಉತ್ಸವಗಳಿಗೆ ರಾಜಕೀಯ ಬಣ್ಣ ಬೇಡ, ಜಾತಿಭೇದವಿಲ್ಲದೆ ಹಿಂದುಗಳು ಧಾರ್ಮಿಕ ಆಚರಣೆಗಳನ್ನು ಆಚರಿಸಿ ನಮ್ಮ ಸಂಸ್ಕತಿ, ಪರಂಪರೆಯವನ್ನು ಉಳಿಸಬೇಕು ಎಂದು ಕರೆಯಿತ್ತರು.

ರಾಜರ ಆಳ್ವಿಕೆ ನಶಿಸಿದರೂ ನಮ್ಮಲ್ಲಿ ನಾಡ ಹಬ್ಬ ದಸರಾ ಆಚರಣೆಯ ವೈಭವ ವಿಶ್ವವಿಖ್ಯಾತವಾಗಿದೆ. ಕೆಟ್ಟದನ್ನು ಹೋಗಲಾಡಿಸಿ ಒಳ್ಳೆಯದನ್ನು ಪಡೆಯುವ ಸಂತೇತದ ದಸರಾ ಮಹೋತ್ಸವ ನಮ್ಮ ನಾಡಿನ ವಿಶಿಷ್ಟ, ವಿಶೇಷ ಆಚರಣೆ. ಗಿಡಮರ, ಪ್ರಕೃತಿಯನ್ನೂ ದೇವರಾಗಿ ಪೂಜಿಸುವ ನಮ್ಮ ಸಂಸ್ಕತಿ ಜಗತ್ತಿನ ಶೇಷ್ಠ ಸಂಸ್ಕತಿ. ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕತಿ, ಸಂಪ್ರದಾಯಗಳ ಮೌಲ್ಯ, ಸಾರವನ್ನು ತಿಳಿಸಬೇಕು. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಅಪ್ಪಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ ದುಷ್ಟ ಪರಿಸ್ಥಿತಿ ನಮಗೆ ಬರಬಾರದು, ಹಿರಿಯರನ್ನು, ದೇಶವನ್ನು ಗೌರವಿಸುವ ರಕ್ಷಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಭಾರತೀಯ ಉಡುಗೆ ತೊಡುಗೆಗಳನ್ನು ತೊಡಲು, ನಮ್ಮ ಆಚಾರ, ವಿಚಾರಗಳನ್ನು ಅನುಸರಿಸಲು ತಿಳಿಹೇಳಬೇಕು ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಸರ್ಕಾರ ಮಾಡುವ ಕೆಲಸವನ್ನು ತುಮಕೂರು ದಸರಾ ಸಮಿತಿ ಮಾಡುತ್ತಿದೆ. ಕಳೆದ 33 ವರ್ಷಗಳಿಂದ ಸತ್ಸಂಪ್ರದಾಯದಿಂದ ದಸರಾ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದೆ. ಇಂತಹ ಆಚರಣೆಗಳು ನಮ್ಮ ಧಾರ್ಮಿಕ ಶ್ರದ್ಧೆ, ರಾಷ್ಟ್ರ ಭಕ್ತಿಗೆ ಪ್ರೇರಣೆಯಾಗುತ್ತವೆ. ತಮ್ಮ ಮನೆಯ ಹಬ್ಬದಂತೆ ನೀವೆಲ್ಲರೂ ಸ್ವಯಂಪ್ರೇರಿತರಾಗಿ ಬಂದು ನಾಡಹಬ್ಬ ಆಚರಣೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ ವಿಚಾರ. ನಮ್ಮ ಆಚಾರ, ವಿಚಾರಗಳನ್ನು ಉಳಿಸಿಕೊಂಡು ಹೋಗುವ ಕಾರ್ಯದಲ್ಲಿ ಪರಸ್ಪರ ಕೈ ಜೋಡಿಸಿ ಸಾಗಬೇಕು ಎಂದು ಹೇಳಿದರು.

ಗ್ರಾಮಾಂತರ ಕ್ಷೇತ ಶಾಸಕ ಬಿ.ಸುರೇಶ್​ಗೌಡ, ದಸರಾ ಸಮಿತಿ ಅಧ್ಯಕ್ಷ ಬಿ.ಎಸ್​.ಮಂಜುನಾಥ್​, ಕಾರ್ಯಾಧ್ಯಕ್ಷ ಡಾ.ಎಸ್​.ಪರಮೇಶ್​ ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್​ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಾದ ಯಶೋಧಮ್ಮ, ಕಿರಣ್​ಕುಮಾರ್​, ಲಲಿತಾಶ್ರೀ, ಚಿಕ್ಕರಂಗಮ್ಮ, ಅಶ್ವತ್ಥ, ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿಲಾಯಿತು.

ನಂತರ ನೀಲಾಲಯ ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಮಹಿಷಾಸುರ ಮರ್ಧಿನಿ ನೃತ್ಯ ರೂಪಕ ಪ್ರದರ್ಶನವಾಯಿತು. ಬೆಳಗ್ಗೆ ಧಾರ್ಮಿಕ ಉತ್ಸವದ ಅಂಗವಾಗಿ ಮಹಾಗಣಪತಿ, ಶ್ರೀ ದುರ್ಗಾ ಹೋಮ, ಭೂಮಿ ಪೂಜೆ, ಧ್ವಜಾರೋಹಣ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net