

ಬೆಂಗಳೂರು: ನವರಾತ್ರಿ ಅಂಗವಾಗಿ ನಗರಾದ್ಯಂತ ಮಂದಿರಗಳಲ್ಲಿ ವಿಶೇಷವಾಗಿ ದೇವಿ ಹಾಗೂ ದುರ್ಗಾದೇವಿ ಮಂದಿರಗಳು ಅಲಂಕಾರದಿಂದ ಕಂಗೊಳಿಸುತ್ತಿದ್ದು, ವಿಶೇಷ ಪೂಜೆ, ಅಲಂಕಾರಗಳು ನಡೆಯಿತು.
ಬನಶಂಕರಿ ದೇವಾಲಯ, ಮಲ್ಲೇಶ್ವರದ ಕನ್ನಿಕಾಪರಮೇಶ್ವರಿ, ಸರ್ಕಲ್ ಮಾರಮ್ಮ ದೇವಾಲಯ, ಜೆ.ಪಿ. ನಗರ 2ನೇ ಹಂತದ ದುರ್ಗಾ ಪರಮೇಶ್ವರಿ, ಕೆ.ಆರ್. ರಸ್ತೆಯ ಉಮಾ ಮಹೇಶ್ವರಿ, ಜಯನಗರದ ನಿಮಿಷಾಂಬ ದೇವಾಲಯ, ಅಂಜನಾಪುರದ ಮಾರಮ್ಮ ದೇವಾಲಯ, ಮತ್ತಿಕೆರೆಯ ಚೌಡೇಶ್ವರಿ, ಕೆಂಪೇಗೌಡನಗರದ ಬಂಡಿಮಹಾಕಾಳಿ ಸೇರಿ ದೇವಿ ದೇವಾಲಯಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಹುಕಾಲದ ದೇವಿಗೆ ನಿಂಬೆಹಣ್ಣಿನ ದೀಪ ಬೆಳೆಗಿ, ಬೆಲ್ಲದ ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಕೆಲವೆಡೆ ಹೂವಿನ ಅಲಂಕಾರ ಮಾಡಿದ್ದರೆ, ಮತ್ತೆ ಕೆಲವೆಡೆ ಹಣ್ಣಗಳು, ವೀಳ್ಯದೆಲೆ, ಬಳೆ, ಒಣ ಹಣ್ಣುಗಳು, ಬೆಣ್ಣೆ ಹೀಗೆ ಹಲವು ರೀತಿಯ ಅಲಂಕಾರ ಮಾಡಲಾಗಿತ್ತು. ವಿಜಯದಶಮಿಯವರೆಗೂ ನಿತ್ಯ ವಿಶೇಷ ಅಲಂಕಾರ ಹಾಗು ಪೂಜೆಗಳು ನಡೆಯಲಿವೆ.
ಬನಶಂಕರಿಯಲ್ಲಿ ಪುಷ್ಪಯಾಗ: ಬನಶಂಕರಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ದೇವಿಗೆ ಅಭಿಷೇಕ ಮಾಡಿ ಬಣ್ಣ ಬಣ್ಣದ ಬಳೆಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರತಿ ವರ್ಷ ನವರಾತ್ರಿಯ ಮೊದಲ ಶುಕ್ರವಾರ ಪುಷ್ಪಯಾಗ ಸಹ ನಡೆಯಲಿದೆ. ಅದರಂತೆ ಈ ಬಾರಿಯೂ ಶಾಸಕ ಎಂ. ಕೃಷ್ಣಪ್ಪ ಅವರಿಂದ ಬನಶಂಕರಿ ದೇವಾಲಯದಲ್ಲಿ ಶುಕ್ರವಾರ ಸಂಜೆ 2 ಸಾವಿರ ಕೆ.ಜಿ. ಹೂವುಗಳಿಂದ ಪುಷ್ಪಯಾಗ ಅದ್ಧೂರಿಯಾಗಿ ನಡೆಯಿತು. ಮಲ್ಲಿಗೆ, ಜಾಜಿ, ಬಿಲ್ವಪತ್ರೆ, ಗುಲಾಬಿ, ಸೇವಂತಿಗೆ, ಕನಕಾಂಬರ, ನೀಲಾಂಬರಿ, ಪತ್ರೆ, ತುಳಸಿ, ಕಾಕಡ, ಮಳ್ಳೆಹೂವು, ಸುಗಂಧರಾಜ ಸೇರಿ 40 ವಿವಿಧ ಬಗೆಯ ಹೂವುಗಳಿಂದ ದೇವಿಗೆ ಪುಷ್ಪಾಭಿಷೇಕ ನಡೆಯಿತು.