ಕೆಐಎನಲ್ಲಿ ದೇಶದ ಮೊದಲ ಸರಕು ಸಾಗಣೆ ಟರ್ಮಿನಲ್: 2 ಲಕ್ಷ ಚದರ ಅಡಿ ವಿಸ್ತೀರ್ಣ; ಸಾಗಣೆ ಸಾಮರ್ಥ್ಯ 7.2 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಳ

kil
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ದ ಮೂಲಕ ಸರಕು ಸಾಗಣೆ ಸೇವೆಯನ್ನು ಇನ್ನಷ್ಟು ಉತ್ತಮವಾಗಿಸಲು 2 ಲಕ್ಷ ಚದರ ಅಡಿ ವಿಸ್ತೀರ್ಣದ ಸರಕು ಸಾಗಣೆ ಟರ್ಮಿನಲ್ ಲೋಕಾರ್ಪಣೆ ಮಾಡಲಾಗಿದೆ. ಆ ಮೂಲಕ ಸರಕು ಸಾಗಣೆಗೆ ಪ್ರತ್ಯೇಕ ಟರ್ಮಿನಲ್ ಹೊಂದಿದ ಮೊದಲ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನೂತನ ಟರ್ಮಿನಲ್‌ನಿಂದ ವಾರ್ಷಿಕ 1.5 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆಗೆ ಹೆಚ್ಚುವರಿ ಅವಕಾಶ ದೊರೆತಂತಾಗಿದೆ. ಸದ್ಯ 5.7 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಲಾಗುತ್ತಿದ್ದು, ಅದು ಈಗ 7.2 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಳವಾದಂತಾಗಿದೆ. ಆ ಮೂಲಕ ಕೆಐಎ ದೇಶದ ಇತರ ವಿಮಾನನಿಲ್ದಾಣಗಳಿಗಿಂತ ಹೆಚ್ಚಿನ ಸರಕು ಸಾಗಣೆ ಸಾಮರ್ಥ್ಯದ ಹಾಗೂ ಸರಕು ಸಾಗಣೆಗೆ ಪ್ರತ್ಯೇಕ ಟರ್ಮಿನಲ್ ಹೊಂದಿದ ನಿಲ್ದಾಣ ಎಂಬ ಖ್ಯಾತಿ ಇದರದ್ದಾಗಿದೆ.

ನೂತನ ಟರ್ಮಿನಲ್‌ನಲ್ಲಿ ಸರಕುಗಳನ್ನು ಸ್ವೀಕರಿಸಲು, ವಿತರಿಸಲು ಯಾಂತ್ರಿಕ ಟ್ರಕ್ ಡಾಕ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಸಂಸ್ಥೆಗೆ ಪ್ರತ್ಯೇಕ ಪ್ರದೇಶ ನಿಗದಿ ಮಾಡಲಾಗಿದ್ದು, ಸರಕು ಸಾಗಣೆಯಲ್ಲಿನ ಗೊಂದಲಕ್ಕೆ ಆಸ್ಪದ ಇಲ್ಲದಂತಾಗಲಿದೆ. ಜತೆಗೆ ಕಸ್ಟಮ್ಸ್ ಕಚೇರಿಗೂ ನೂತನ ಟರ್ಮಿನಲ್‌ನಲ್ಲಿ ಜಾಗ ನಿಗದಿ ಮಾಡಲಾಗಿದೆ.

ಬೆಂಗಳೂರು ವಲಯದ ಸೀಮಾ ಸುಂಕ ವಿಭಾಗದ ಮುಖ್ಯ ಆಯುಕ್ತ ಎಂ. ಶ್ರೀನಿವಾಸ್ ನೂತನ ಟರ್ಮಿನಲ್ ಉದ್ಘಾಟಿಸಿದರು. ಈ ವೇಳೆ ವಿಮಾನನಿಲ್ದಾಣ ಮತ್ತು ವಾಯು ಸರಕು ಸಂಕೀರ್ಣದಲ್ಲಿನ ಸೀಮಾ ಸುಂಕ ವಿಭಾಗದ ಪ್ರಧಾನ ಆಯುಕ್ತ ಅಶೋಕ್, ಎಕ್ಸ್‌ಪ್ರೆಸ್ ಇಂಡಸ್ಟ್ರಿ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್‌ ಕುಮಾರ್, ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net