ಸಾಹಿತ್ಯ, ಭಾಷೆಯಿಂದ ಜನರಲ್ಲಿ ಒಡಕು ಸಲ್ಲ

CUK
Published on

ಕಲಬುರಗಿ: ಸಾಹಿತ್ಯ ಮತ್ತು ಭಾಷೆ ಜನರನ್ನು ಒಗ್ಗೂಡಿಸಬೇಕೇ ಹೊರತು, ಒಡಕುಂಟು ಮಾಡಬಾರದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿವಿ ಮಾನವಿಕ ಮತ್ತು ಭಾಷಾ ನಿಕಾಯ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯತೆ ಮತ್ತು ಸಾಹಿತ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಜನರಲ್ಲಿ ರಾಷ್ಟ್ರೀಯತೆ, ರಾಷ್ಟ್ರ ಭಕ್ತಿ ಮತ್ತು ರಾಷ್ಟ್ರ ಪ್ರೇಮ ಗಟ್ಟಿಗೊಳಿಸಬೇಕು. ದೇಶ ಸೇವೆ ಗುರಿಯಿಂದ ದೂರ ಸರಿದರೆ ಸಾಹಿತ್ಯ, ಭಾಷೆ ಮಹತ್ವ ಕಳೆದುಕೊಳ್ಳುತ್ತವೆ. ರಾಷ್ಟ್ರೀಯ ಆಂದೋಲನ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಿದ್ದನ್ನು ಮರೆಯುವಂತಿಲ್ಲ. ಭಾಷೆಯಲ್ಲಿ ಆಗಾಧ ಶಕ್ತಿ ಇದೆ. ಆದರೆ ಇದರ ದುರುಪಯೋಗ ಆಗಬಾರದು. ಸಾಹಿತ್ಯ, ಭಾಷೆ ನಮ್ಮ ಜತೆಗೆ ಸಮಾಜ, ದೇಶದ ವ್ಯಕ್ತಿತ್ವವನ್ನೂ ರೂಪಿಸುತ್ತವೆ ಎಂದರು.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿಜಯ್ ನಾಗಣ್ಣವರ್ ಮಾತನಾಡಿ, ರಾಷ್ಟಿಯತೆ ಭಾರತೀಯರ ರಕ್ತದಲ್ಲೇ ಇದೆ. ವಸುದೈವ ಕುಟುಂಬಕ ಮತ್ತು ವಂದೇ ಮಾತರಂ ಎಂಬ ಉಕ್ತಿ ರಾಷ್ಟಿಯತೆಯ ಕಲ್ಪನೆ ವಿವರಿಸುತ್ತದೆ. ಆದರೆ ಭಾಷೆಗಳು ಜನರ ಮನಸ್ಸಿನಲ್ಲಿ ರಾಷ್ಟಿಯತೆ ಗಟ್ಟಿಗೊಳಿಸಲು ಅಡತಡೆ ಉಂಟು ಮಾಡಿವೆ. ಹಿಂದಿ ರಾಷ್ಟçಭಾಷೆಯಾಗಿ ಸ್ವೀಕೃತಗೊಂಡಿಲ್ಲ. ಹೀಗಾಗಿ ಸಾಹಿತ್ಯ ಮತ್ತು ಭಾಷೆಗಳು ರಾಷ್ಟಿಯತೆ ಬೆಳೆಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ.ಬಸವರಾಜ ಡೋಣೂರ ಮಾತನಾಡಿ, ಬಹುತ್ವದಿಂದ ಕೂಡಿರುವ ಭಾರತೀಯರನ್ನು ಒಗ್ಗೂಡಿಸುವ ಶಕ್ತಿ ಕೇವಲ ರಾಷ್ಟಿಯತೆಗಿದೆ. ಜನರನ್ನು ಒಗ್ಗೂಡಿಸುವ, ಏಕತೆ ಸಾಧಿಸುವ, ಭಾರತೀಯರು ಒಂದು ಜನಾಂಗ, ಒಂದು ದೇಶವಾಗಿ ಬದುಕುವಂತೆ ಮಾಡುವ ಶಕ್ತಿಯೂ ರಾಷ್ಟಿಯತೆಗಿದೆ ಎಂದರು.
ಪ್ರೊ.ಉಮಾರಾಣಿ, ಸಾಯಿಕೃಷ್ಣ ಭಾರದ್ವಾಜ್, ಮಹೇಂದ್ರ ಎಂ. ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಬಾಳಿಕಾಯಿ ನಿರೂಪಣೆ ಮಾಡಿದರು. ಡಾ.ಆಶಿಶ್ ಬೆನಮಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net