ಹೈಡ್ರೋಜನ್ ಇಂಧನ ಕುರಿತು ರಾಷ್ಟ್ರೀಯ ಕಾರ್ಯಾಗಾರ; ಅಲಯನ್ಸ್ ಯೂನಿವರ್ಸಿಟಿ ಆಯೋಜನೆ

alliance
Published on

ಬೆಂಗಳೂರು: ಭವಿಷ್ಯದ ಇಂಧನ ಮೂಲಗಳ ಆವಿಷ್ಕಾರದ ಕುರಿತು ಹಲವು ಸಂಶೋಧನೆಗಳು ನಡೆಯುತ್ತಿದ್ದು, ಅದರ ಭಾಗವಾಗಿ ಹೈಡ್ರೋಜನ್ ಇಂಧನ ತಂತ್ರಜ್ಞಾನಗಳು ಮತ್ತು ಭವಿಷ್ಯದ ಪ್ರವೃತ್ತಿಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಮತ್ತು ಪ್ಯಾನಲ್ ಚರ್ಚೆಯು ಶುಕ್ರವಾರ ಮತ್ತು ಶನಿವಾರ ನಡೆಯಲಿದೆ. ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ದಿ ಕಂಬ್ಯುಶನ್ ಇನ್‌ಸ್ಟಿಟ್ಯೂಟ್ ಇಂಡಿಯನ್ ಸೆಕ್ಷನ್ (ಸಿಐಐಎಸ್) ಆಶ್ರಯದಲ್ಲಿ ಏರ್ಪಡಿಸಿರುವ ಎರಡು ದಿನಗಳ ಕಾರ್ಯಾಗಾರವು ಚಂದಾಪುರದಲ್ಲಿರುವ ವಿವಿ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷರಾದ ಡಾ.ವಿ.ನಾರಾಯಣನ್, ಸಿಎಸ್‌ಐಆರ್ ಮಹಾನಿರ್ದೇಶಕಿ ಎನ್.ಕಲೈಸೆಲ್ವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಸಿಐಐಎಸ್ ಅಧ್ಯಕ್ಷರು ಹಾಗೂ ನೀತಿ ಆಯೋಗದ ಸದಸ್ಯರಾದ ಡಾ. ವಿಜಯ್ ಕುಮಾರ್ ಸಾರಸ್ವತ್ ಪ್ರಮುಖ ಭಾಷಣ ಮಾಡಲಿದ್ದಾರೆ. ಕಾರ್ಯಾಗಾರದಲ್ಲಿ ಉದ್ಯಮ ತಜ್ಞರು, ಅಕಾಡೆಮಿಕ್ ಸಂಶೋಧಕರು, ನೀತಿ ನಿರ್ಣಾಯಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಹೈಡ್ರೋಜನ್‌ನನ್ನು ಶುದ್ಧ ಇಂಧನ ಮೂಲವಾಗಿ ರೂಪಾಂತರಿಸುವ ಪ್ರಕ್ರಿಯೆಯ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಐಐಎಸ್ ಕಾರ್ಯದರ್ಶಿ ಪ್ರದೀಪ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಲಯನ್ಸ್ ವಿವಿಯ ಸಹ ಕುಲಾಧಿಪತಿ ಅಭಯ್ ಜಿ.ಚೆಬ್ಬಿ, ಕುಲಪತಿ ಡಾ.ಪ್ರಿಸ್ಟ್ಲಿ ಬಿ. ಶಾನ್, ಪ್ರಾಧ್ಯಾಪಕರಾದ ಡಾ. ಯೋಗೇಶ್ ಕುಮಾರ್, ನಿರ್ದೇಶಕರಾದ ಡಾ. ಮುಕುಲ್ ಸಕ್ಸೇನಾ ಮತ್ತು ಡಾ. ಸೈಯದ್ ಅಲೇ ಹಾಶಿಮ್ ಉಪಸ್ಥಿತರಿದ್ದರು.

ವಿವಿಧ ಗೋಷ್ಠಿಗಳ ಆಯೋಜನೆ

ಆಂತರಿಕ ದಹನ ಎಂಜಿನ್‌ಗಳು, ಗ್ಯಾಸ್ ಟರ್ಬೈನ್ ಎಂಜಿನ್‌ಗಳು ಮತ್ತು ಹೊಸ ತಲೆಮಾರಿನ ಪ್ರೊಪಲ್ಷನ್ ವ್ಯವಸ್ಥೆಗಳ ಬಳಕೆ, ಹೈಡ್ರೋಜನ್ ಅಳವಡಿಕೆ, ಸುರಕ್ಷತಾ ಕ್ರಮ ಮತ್ತು ಎಐ ಪಾತ್ರದ ಕುರಿತು ಚರ್ಚಿಸಲಾಗುವುದುಈ ಕಾರ್ಯಾಗಾರವು ಭಾರತದ ಹೈಡ್ರೋಜನ್ ತಂತ್ರಜ್ಞಾನಗಳ ಕುರಿತ ತಾಂತ್ರಿಕ ಪ್ರಗತಿ, ಕ್ಷೇತ್ರ ವಿಶೇಷ, ಸವಾಲುಗಳು ಮತ್ತು ಉದ್ಯಮಗಳ ಸಹಯೋಗದ ಅವಕಾಶಗಳ ಮೇಲೆ ಬೆಳಕು ಚೆಲ್ಲಲಿದೆ. ಸಾರಿಗೆ, ಏರೋಸ್ಪೇಸ್, ಇಂಧನ ಉತ್ಪಾದನೆ, ಸುರಕ್ಷತಾ ವ್ಯವಸ್ಥೆಗಳು, ರಾಕೆಟ್‌ಗಳು ಮತ್ತು ರೋಟೇಟಿಂಗ್ ಡಿಟೊನೇಷನ್ ಎಂಜಿನುಗಳಲ್ಲಿ ಹೈಡ್ರೋಜನ್‌ನ ಬಳಕೆಯ ಕುರಿತ ವಿಶೇಷ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಐಐಟಿ ಮುಂಬೈ, ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೊರೇಟರೀಸ್ ಮತ್ತಿತರ ಸಂಬಂಧಪಟ್ಟ ಸಂಸ್ಥೆಗಳ ತಜ್ಞರು, ನೂರಕ್ಕು ಹೆಚ್ಚು ಸಂಶೋಧಕರು, ಪಿಎಚ್‌ಡಿ ವಿದ್ಯಾರ್ಥಿಗಳು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net