

ಯಲ್ಲಾಪುರ: ತಪ್ಪು ಗ್ರಹಿಕೆಯಿಂದ, ಬೇರಾಗಿ ವಿಚ್ಛೇಧನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿ ಒಂದಾದರು. ಮತ್ತೆ ಕೂಡಿ ಹೆಜ್ಜೆ ಹಾಕುವ ವಾಗ್ದಾನ ಮಾಡಿದರು.
ಇದೆಲ್ಲ ಸಾಧ್ಯವಾಗಿಸಿದ್ದು, ಲೋಕ ಅದಾಲತ್. ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಲೋಕ ಅದಾಲತ್ ನಡೆಯಿತು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಜೋಡಿಯನ್ನು ಸಂಧಾನದ ಮೂಲಕ ಒಂದುಗೂಡಿಸಲಾಯಿತು. ಇಬ್ಬರನ್ನೂ ಕರೆಸಿ ಮಾತನಾಡಿ ಬುದ್ಧಿವಾದ ಹೇಳಿದ ನ್ಯಾಯಾಧೀಶರು, ಜೀವನದ ಏರಿಳಿತಗಳ ಪಾಠ ಹೇಳಿದರು. ಪಟ್ಟಣದಿಂದ ಮಾಲೆ ತರಿಸಿ ಇಬ್ಬರಿಗೂ ಹಾಕಿ ಶುಭ ಹಾರೈಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ.ಹಳ್ಳಕಾಯಿ ಅವರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಒಟ್ಟು 117 ಪ್ರಕರಣಗಳಲ್ಲಿ 11 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸಂಧಾನಕಾರರಾಗಿ ನ್ಯಾಯವಾದಿ ರವಿ ಶಿವನಗೌಡ ಪಾಟೀಲ ಕಾರ್ಯನಿರ್ವಹಿಸಿದರು. ಸರ್ಕಾರಕ್ಕೆ ಒಟ್ಟು 11,99,960 ರೂ ಭರಣ ಮಾಡಲಾಯಿತು.
ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ ಅವರು ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ 164 ಪ್ರಕರಣಗಳಲ್ಲಿ 145 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸಂಧಾನಕಾರರಾಗಿ ನ್ಯಾಯವಾದಿ ವೆಂಕಟರಮಣ ಭಟ್ಟ ಕಾರ್ಯನಿರ್ವಹಿಸಿದರು. ಸರ್ಕಾರಕ್ಕೆ 98,31,889 ರೂ ಭರಣ ಮಾಡಲಾಯಿತು.
ಇದನ್ನೂ ಓದಿ: ಕೈಗಾ ಉದ್ಯೋಗಿಗಳ ಬಹು ದಿನಗಳ ಹೋರಾಟಕ್ಕೆ ಜಯ