

ಕಾರವಾರ: ಭಾರತೀಯ ಅಣು ವಿದ್ಯುತ್ ನಿಗಮ (ಎನ್‌ಪಿಸಿಐಎಲ್)ನೌಕರರಿಗೆ ನಿಯಮದಂತೆ ನಿವೃತ್ತಿಯ ಸೌಲಭ್ಯ ನೀಡುವ ಸಂಬಂಧ ಮಾರ್ಗಸೂಚಿಯನ್ನು ನಿಗಮವು ಪ್ರಕಟಿಸಿದೆ. ಅಣು ವಿದ್ಯುತ್ ನಿಗಮದ ನೌಕರರ ಬಹು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಕೈಗಾ ಅಣು ವಿದ್ಯುತ್ ನಿಗಮದ ಪೆನ್ಶನ್ ಆ್ಯಕ್ಷನ್ ಕೋ-ಆರ್ಡಿನೇಶನ್ ಕಮಿಟಿ ನಡೆಸಿದ ಕಾನೂನು ಹೋರಾಟದ ಫಲ ಇಡೀ ದೇಶದ ಎಲ್ಲ ಅಣು ವಿದ್ಯುತ್ ಸ್ಥಾವರಗಳ ಸುಮಾರು 12 ಸಾವಿರ ನೌಕರರಿಗೆ ಅನ್ವಯವಾಗುತ್ತಿರುವುದು ವಿಶೇಷ.
ನಿವೃತ್ತಿಯಾದ ನೌಕರರಿಗೆ ಅಣು ವಿದ್ಯುತ್ ನಿಗಮದಿಂದ ಶೇ. 10 ರಷ್ಟು ಪಿಎಫ್, ಶೇ. 4 ರಷ್ಟು ಗ್ರಾಚುಟಿ ಹಾಗೂ ನಿವೃತ್ತಿಯ ನಂತರ ವೈದ್ಯಕೀಯ ಸೌಲಭ್ಯವನ್ನು ಮಾತ್ರ ನೀಡಲಾಗುತ್ತಿತ್ತು. ಉದ್ಯೋಗಿಯ ಒಟ್ಟಾರೆ ವೇತನದ ಶೇ. 30 ರಷ್ಟನ್ನು ನಿವೃತ್ತಿ ಸೌಲಭ್ಯವಾಗಿ ನೀಡಬೇಕು ಎಂಬ ಡಿಪಿಇ ನಿವೃತ್ತಿ ವೇತನ ನಿಯಮವನ್ನು ಎನ್‌ಪಿಸಿಐಎಲ್ ಪಾಲಿಸುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕೈಗಾದ ಪೆನ್ಶನ್ ಆ್ಯಕ್ಷನ್ ಕೋ-ಆರ್ಡಿನೇಶನ್ ಕಮಿಟಿಯು 2017 ರಲ್ಲಿ ಧಾರವಾಡ ಹೈಕೋರ್ಟ್ ಮೊರೆ ಹೋಗಿತ್ತು. ಸುಮಾರು 170 ಕ್ಕೂ ಅಧಿಕ ದಾಖಲೆಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸಾಕಷ್ಟು ಎನ್‌ಪಿಸಿಐಎಲ್ ನೌಕರರಿಗೆ ಡಿಎಇ ಮಾರ್ಗಸೂಚಿಯಂತೆ ನಿವೃತ್ತಿ ವೇತನ ನೀಡುವಂತೆ 2021 ರಲ್ಲಿ ಧಾರವಾಡ ಹೈಕೋರ್ಟ್ ಆದೇಶ ನೀಡಿತ್ತು. ಅದೇ ಆಧಾರವಾಗಿಟ್ಟುಕೊಂಡು ಮುಂಬೈ ಹೈಕೋರ್ಟ್ ಸಹ ಆದೇಶ ಮಾಡಿತ್ತು.
ನ್ಯಾಯಾಲಯದ ಆದೇಶ ಜಾರಿ ಮಾಡುವಂತೆ ಕೈಗಾ ನೌಕರರು ಎನ್‌ಪಿಸಿಐಎಲ್ ಚೇರ್ಮನ್ ಹಾಗೂ ಇತರ ಹಿರಿಯರನ್ನು ಭೇಟಿಯಾಗಿ ಒತ್ತಾಯಿಸಿದ್ದರು. ಪರಿಣಾಮ ಎನ್‌ಪಿಸಿಐಎಲ್ ಈ ಸಂಬಂಧ ಸಮಿತಿಯೊಂದನ್ನು ರಚಿಸಿ, ದಾಖಲೆಗಳನ್ನು ಕಲೆ ಹಾಕಿತ್ತು. ಈಗ ನೌಕರರ ಒಟ್ಟಾರೆ ವೇತನದ ಶೇ.12 ರಷ್ಟು ಹೆಚ್ಚುವರಿ ನಿವೃತ್ತಿ ಸೌಲಭ್ಯ ನೀಡುವ ಬಗ್ಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದು ಈಗಾಗಲೇ ನಿವೃತ್ತರಾದ ನೌಕರರಿಗೂ ಅನ್ವಯವಾಗಲಿದೆ. ಪಿಎಫ್, ಗ್ರಾಚುಟಿ, ವೈದ್ಯಕೀಯ ಸೌಲಭ್ಯದ ಜತೆ ಶೇ. 12 ರಷ್ಟು ನಿವೃತ್ತಿ ಸೌಭ್ಯವೂ ಇನ್ನು ಡಿಎಇ ನಿಯಮದಂತೆಯೇ ದೊರೆಯಲಿದೆ ಎಂದು ಕೈಗಾ ಯೋಜನೆಯ ನೌಕರರ ಸಂಘ(ಕೆಪಿಇಎ)ದ ಪ್ರಧಾನ ಕಾರ್ಯದರ್ಶಿ ಕಾಶೀನಾಥ ಖಾಡೆ ತಿಳಿಸಿದ್ದಾರೆ.
ಇದನ್ನೂ ಓದಿ:8290 ರೇಶನ್ ಕಾರ್ಡ್ ಶೀಘ್ರ ರದ್ದು!!
ನ್ಯಾಯಾಲಯದ ಆದೇಶದಂತೆ ಶೇ. 12 ರಷ್ಟು ಹೆಚ್ಚುವರಿ ನಿವೃತ್ತಿ ಸೌಲಭ್ಯ ನೀಡಲು ಎನ್‌ಪಿಸಿಐಎಲ್ ಬೋರ್ಡ್ ಅಂತಿಮ ಯೋಜನೆ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಸೌಲಭ್ಯ ಶೀಘ್ರ ಜಾರಿಗೆ ನಾವು ಒತ್ತಾಯಿಸುತ್ತೇವೆ. ಒಮ್ಮೆ ಜಾರಿಯಾದ ನಂತರ ಮತ್ತೇನಾದರೂ ಬದಲಾವಣೆ ಬೇಕಿದ್ದಲ್ಲಿ ನಾವು ಮುಂದೆ ಹೋರಾಟ ಮಾಡಲಿದ್ದೇವೆ.ಕಾಶೀನಾಥ ಖಾಡೆಪ್ರಧಾನ ಕಾರ್ಯದರ್ಶಿ ಕೆಪಿಇಎ, ಕೈಗಾ