

ಕುಶಾಲನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ಡಿಸೆಂಬರ್ ಅಂತ್ಯ ಅಥವಾ 2024ರ ಜನವರಿ ಮೊದಲ ವಾರದಲ್ಲಿ 17 ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್.ಪಲ್ಲೇದ್ ತಿಳಿಸಿದರು.
ಟೂರ್ನಿಯ ರೂಪುರೇಷೆ, ಸಂಘಟನೆ, ಸಮಿತಿ ರಚನೆಗೆ ಸಂಬಂಧಿಸಿದಂತೆ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಟೂರ್ನಿಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸುವ ಸಂಬಂಧ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಕ್ರೀಡಾ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು. ವಿವಿಧ ಶಿಕ್ಷಕರ ಸಂಘಟನೆಗಳು ಹಾಗೂ ಸ್ಥಳೀಯ ಸಮುದಾಯ ಒಳಗೊಂಡಂತೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಟೂರ್ನಿಯನ್ನು ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯ ಟರ್ಫ್ ಮೈದಾನ, ಮಡಿಕೇರಿಯ ಸಾಯಿ ಹಾಕಿ ಟರ್ಫ್, ಸೋಮವಾರಪೇಟೆ ಹಾಗೂ ಪೊನ್ನಂಪೇಟೆಯ ಟರ್ಫ್ ಮೈದಾನಲ್ಲಿ ಏಕಕಾಲದಲ್ಲಿ ಆರು ದಿನಗಳ ಕಾಲ ಲೀಗ್ ಮಾದರಿಯಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಡಯಟ್ ಉಪನ್ಯಾಸಕ ಸಿದ್ದೇಶ್ ಕುಮಾರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಿಆರ್‌ಪಿ ಕೆ.ಶಾಂತಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರತಾಪ್, ಸುರೇಶ್ ಕುಮಾರ್, ದೊಡ್ಡಯ್ಯ, ಎನ್.ಡಿ.ಸೋಮಶೇಖರ್, ಸುಂದರ್, ಪ್ರಸನ್ನ, ಶಿಕ್ಷಕ ಎಚ್.ಸಿ.ಬಸವರಾಜ್, ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಇತರರು ಇದ್ದರು.