ಸುಳ್ಯ: ನಮ್ಮ ದೇಶದಲ್ಲಿ ಸಂವಿಧಾನ ಎಂಬುವುದು ಇಲ್ಲದೆ ಇದ್ದಿದ್ದರೆ ಈ ದೇಶದಲ್ಲಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂವಿಧಾನವನ್ನು ಉಳಿಸುವುದು ಮತ್ತು ಬೆಳೆಸುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನಿಕೇತ್‌ರಾಜ್ ಮೌರ್ಯ ಹೇಳಿದರು.
ಪ್ರಜಾಧ್ವನಿ ಕರ್ನಾಟಕ ವತಿಯಿಂದ ಸುಳ್ಯದಲ್ಲಿ ನಡೆದ ಸಂವಿಧಾನ ಸ್ಮರಣೆಗಾಗಿ ರಾಷ್ಟ್ರಧ್ವಜ ಗೌರವಯಾತ್ರೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸುಳ್ಯ ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಇನಾಯತ್ ಅಲಿ, ಪ್ರಜಾಧ್ವನಿ ಸಂಚಾಲಕ ಗೋಪಾಲ ಪೆರಾಜೆ, ಧರ್ಮಗುರುಗಳಾದ ಸಯ್ಯದ್ ತ್ವಾಹಿರ್ ಸಅದಿ ಬಾ ಅಲವಿ ತಂಙಳ್, ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ವಿಕ್ಟರ್ ಡಿಸೋಜ, ಪ್ರಜಾಧ್ವನಿ ಕಡಬ ಸಂಚಾಲಕ ಟಿ.ಜಿ.ಮ್ಯಾಥ್ಯೂ, ನಿವೃತ್ತ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಪಿ.ಎಂ.ಚೆರಿಯನ್, ವೀರನಾರಿ ಸಂಘದ ಜಿಲ್ಲಾ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.
ಅಶೋಕ್ ಎಡಮಲೆ ಸ್ವಾಗತಿಸಿದರು. ಉಮ್ಮರ್ ಕೆ.ಎಸ್. ವಂದಿಸಿದರು. ಟಿ.ಐ.ಲೂಕಾಸ್ ಹಾಗೂ ಕಾಂತಿ ಕಲ್ಲುಗುಂಡಿ ಕಾರ್ಯಕ್ರಮ ನಿರೂಪಿಸಿದರು.