ಬಂಟ್ವಾಳ: ಕಳೆದ 10 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂದು ಸಂಚರಿಸುತ್ತಿದ್ದ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಕೊನೆಗೂ ಶಾಶ್ವತ ನೆಲೆಯತ್ತ ಸಾಗುತ್ತಿದ್ದು, ನ.30ರಂದು ಪಾಣೆಮಂಗಳೂರಿನಲ್ಲಿ ನಿರ್ಮಾಣಗೊಂಡಿರುವ ನೂತನ ಠಾಣಾ ಕಟ್ಟಡಕ್ಕೆ ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳಲಿದೆ.
ಬಂಟ್ವಾಳಕ್ಕೆ ಮಂಜೂರುಗೊಂಡ ಸಂಚಾರ ಪೊಲೀಸ್ ಠಾಣೆ ಸಾಕಷ್ಟು ವರ್ಷಗಳ ಕಾಲ ಮೆಲ್ಕಾರಿನ ಬೋಳಂಗಡಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಬಳಿಕ ಹೆದ್ದಾರಿ ಕಾಮಗಾರಿಗೆ ಕಟ್ಟಡ ತೆರವುಗೊಂಡ ಕಾರಣಕ್ಕೆ ಮಾರ್ನಬೈಲಿನ ಈಗಿರುವ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಇದೀಗ ಅಲ್ಲಿಂದ ಪಾಣೆಮಂಗಳೂರಿನಲ್ಲಿ 3.18 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.
30ರಂದು ಬೆಳಗ್ಗೆ 11ಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರು ಅತ್ತಾವರ ಪೊಲೀಸ್ ಲೇನ್‌ನಲ್ಲಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಕಟ್ಟಡ ಹಾಗೂ ಬೆಳ್ಳಾರೆಯ ಪೊಲೀಸ್ ವಸತಿ ಗೃಹ ಸಮುಚ್ಚಯವನ್ನು ಉದ್ಘಾಟಿಸಲಿದ್ದಾರೆ.
ಪಾಣೆಮಂಗಳೂರು ಗೂಡಿನಬಳಿ ಹಳೇ ಸೇತುವೆಯು ಸಮೀಪ 78 ಸೆಂಟ್ಸ್ ನಿವೇಶನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ 4,035 ಚ.ಅಡಿ ವಿಸ್ತೀರ್ಣದಲ್ಲಿ ಠಾಣಾ ಕಟ್ಟಡ ನಿರ್ಮಾಣವಾಗಿದ್ದು, ತಳ ಭಾಗದಲ್ಲಿ ಪ್ರತ್ಯೇಕ ಶೌಚಗೃಹಗಳು, ನೆಲಅಂತಸ್ತಿನಲ್ಲಿ ಇನ್‌ಸ್ಪೆಕ್ಟರ್ ಕೊಠಡಿ, 4 ಪಿಎಸ್‌ಐಗಳ ಕೊಠಡಿ, 1 ವಯರ್‌ಲೆಸ್ ಕೊಠಡಿ, 1 ವರ್ಕ್ ಸ್ಟೇಶನ್ ನಿರ್ಮಾಣವಾಗಿದೆ. ಪ್ರಥಮ ಮಹಡಿಯಲ್ಲಿ ಮಹಿಳಾ ಹಾಗೂ ಪುರುಷರ ಪ್ರತ್ಯೇಕ ರೆಸ್ಟ್‌ರೂಮ್‌ಗಳು, ಸ್ಟೋರ್, ರೆಕಾರ್ಡ್ ರೂಮ್, ಪ್ರತ್ಯೇಕ ಶೌಚಗೃಹ ನಿರ್ಮಾಣವಾಗಿದೆ.