

ತುಮಕೂರು: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಭಾಯಿ ಪಟೇಲ್ ಅವರ ಕನಸಾದ ಐಕ್ಯ, ಬಲಿಷ್ಠ ಮತ್ತು ಸ್ವಾವಲಂಬಿ ಭಾರತ ನಿಮಾರ್ಣದ ಸಂಕಲ್ಪ ಯುವಜನರಿಗೆ ಸ್ಫೂರ್ತಿಯಾಗಬೇಕು, ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಬಿಜೆಪಿ ವತಿಯಿಂದ ಶುಕ್ರವಾರ ತುಮಕೂರು ವಿವಿ ಮುಂಭಾಗ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ವಲ್ಲಭಭಾಯಿ ಪಟೇಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಏಕತಾ ಮೆರವಣಿಗೆಗೆ ಚಾಲನೆ ನೀಡಿದರು. ಸ್ವದೇಶಿ ಉತ್ಪನ್ನಗಳ ಬಳಕೆ, ಪ್ರೋತ್ಸಾಹ ಸಂಬಂಧ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸಚಿವ ವಿ.ಸೋಮಣ್ಣ ಮಾತನಾಡಿ, ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಲ್ಲಭಭಾಯಿ ಪಟೇಲರು ಸ್ವಾತಂತ್ರ$್ಯ ನಂತರ ಹರಿದುಹಂಚಿಹೋಗಿದ್ದ ಪ್ರದೇಶಗಳನ್ನು ದೇಶದಲ್ಲಿ ಏಕೀಕರಣಗೊಳಿಸುವ ಕಾರ್ಯದಲ್ಲಿ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯ ಭಾರತೀಯ ಒಕ್ಕೂಟಕ್ಕೆ ಸೇರಿಸುವ ಪ್ರಯತ್ನದಲ್ಲಿ ಸಫಲರಾದರು ಎಂದರು.
ಭಾರತದ ಮೊದಲ ಉಪ ಪ್ರಧಾನಿ, ಮಂತ್ರಿಯಾಗಿ, ಗೃಹ ಸಚಿವರಾಗಿ ಅಖಿಲ ಭಾರತ ಸೇವಾ ವ್ಯವಸ್ಥೆ ಬಲಿಷ್ಠವಾಗಿ ಸ್ಥಾಪನೆಯಾಗಲು ಕಾರಣರಾದರು. ಬಾಡೋರ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ತಮ್ಮ ನಾಯಕತ್ವಕ್ಕಾಗಿ ಸರ್ದಾರ್ ಎಂಬ ಬಿರುದು ಪಡೆದರು. ಭಾರತ ರಾಷ್ಟ್ರೀಯ ಏಕೀಕರಣದ ಬಗ್ಗೆ ರಾಜೀಯಾಗದ ಅಜೇಯ ಮನೋಭಾವಕ್ಕಾಗಿ ಉಕ್ಕಿನ ಮನುಷ್ಯ ಎಂಬ ಬಿರುದು ಪಡೆದರು. ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ವಾರ್ಷಿಕೋತ್ಸವ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದರು.
ಈ ಅಭಿಯಾನ ಯುವಕರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರೀಕ ಜವಾಬ್ದಾರಿಯ ಮನೋಭಾವವನ್ನು ಉಂಟುಮಾಡುವುದರೊಂದಿಗೆ ಭಾರತದ ವಿಭಜಿತ ಪ್ರದೇಶಗಳನ್ನು ಒಂದೇ ರಾಷ್ಟ್ರವಾಗಿ ಏಕೀಕೃತಗೊಳಿಸಿದ ಪಟೇಲ್ ಪರಂಪರೆ ಗೌರವಿಸಲಾಗುವುದು. ಈ ಅಭಿಯಾನದ ಮೂಲಕ ಯುವಕರನ್ನು ಸಾಮಾಜಿಕವಾಗಿ ಪಾಲ್ಗೊಳ್ಳುವಿಕೆಯಲ್ಲಿ ಏಕ ಭಾರತ್ ಆತ್ಮನಿರ್ಭರ ಭಾರತ್ ಎಂಬ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಮತ್ತಿತರರು ಭಾಗವಹಿಸಿದ್ದರು.
ತುಮಕೂರು ವಿವಿಯಿಂದ ಆರಂಭವಾದ ಏಕತಾ ಮೆರವಣಿಗೆ ಶಿವಕುಮಾರಸ್ವಾಮೀಜಿ ವೃತ್ತ, ಭದ್ರಮ್ಮ ವೃತ್ತ, ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, ಕೆಇಬಿ ರಸ್ತೆ ಮೂಲಕ ಸಾಗಿ ಮತ್ತೆ ವಿಶ್ವವಿದ್ಯಾಲಯದಲ್ಲಿ ಸಮಾಗಮಗೊಂಡಿತು. ರಾಷ್ಟ್ರಗಿತೆ ಹಾಡಿ ಕಾರ್ಯಕ್ರಮ ಪೂರ್ಣಗೊಳಿಸಲಾಯಿತು. ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮವಾದರೂ ಮೆರವಣಿಗೆಯಲ್ಲಿ ಪಕ್ಷದ ಭಾವುಟಗಳಿಗೆ ಅವಕಾಶ ನೀಡದೆ ರಾಷ್ಟ್ರ ಧ್ವಜದ ಭಾವುಟ ಹಿಡಿದಿಡಲಾಗಿತ್ತು.
ಬಿಜೆಪಿ ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ವೈ.ಎಚ್.ಹುಚ್ಚಯ್ಯ, ಬ್ಯಾಟರಂಗೇಗೌಡ, ಅಂಬಿಕಾ ಹುಲಿನಾಯ್ಕರ್, ಸಂದೀಪ್ಗೌಡ, ಎಚ್.ಎಂ.ರವೀಶಯ್ಯ, ಕೆ.ವೇದಮೂರ್ತಿ, ನವಚೇತನ್, ಸುಮಿತ್ರಮ್ಮ, ಟಿ.ಕೆ.ಧನುಷ್, ಪ್ರದಿಪ್ಕುಮಾರ್, ಟಿ.ಹೆಚ್.ಹನುಮಂತರಾಜು ಮತ್ತಿತರರು ಇದ್ದರು.
====
ಜಿಲ್ಲಾಡಳಿತದ ವಿರುದ್ಧ ಸೋಮಣ್ಣ ಆಕ್ರೋಶ
ಬಿಜೆಪಿ ವತಿಯಿಂದಲೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ.ವೆಂಕಟೇಶ್ವರಲು ಭಾಗವಹಿಸಿದ್ದರು ಆದರೆ, ಜಿಲ್ಲಾಡಳಿತದ ವತಿಯಿಂದ ಯಾರೋಬ್ಬ ಅಧಿಕಾರಿಗಳೂ ಭಾಗವಹಿಸಿರಲಿಲ್ಲ. ಅಧಿಕಾರಿಗಳ ಗೈರು ಹಾಜರಿಗೆ ಕೆಂಡಾಮಂಡಲರಾದ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಬಿ.ಸುರೇಶ್ಗೌಡ ಹರಿಹಾಯ್ದರು.
ಸಚಿವ ವಿ.ಸೋಮಣ್ಣ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ದೇಶದ ಏಕತೆ, ಸಮಗ್ರತೆಗೆ ಬಗ್ಗೆ ಕಾರ್ಯಕ್ರಮಗಳು ನಡೆಯುತ್ತಿರುವಾಗ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಕಡೆಗಣಿಸಿದೆ ಎಂದು ಹರಿಹಾಯ್ದರು.
ದೇಶವಿದ್ದರೆ ನಾವು, ಮೊದಲು ದೇಶ ಆಮೇಲೆ ಉಳಿದ ವಿಚಾರ. ದೇಶದ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಕಾರ್ಯಕ್ರಮವೆಂಬ ಭೇದ ಮಾಡಬಾರದು. ಕಾರ್ಯಕ್ರಮದ ಬಗ್ಗೆ ತಾವು ಜಿಲ್ಲಾಧಿಕಾರಿಗಳಿಗೆ ಮೊದಲೇ ಮಾತನಾಡಿದ್ದೆ. ಅವರು ಭಾಗವಹಿಸದೆ ರ್ನಿಲಕ್ಷ ಮಾಡಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.