ಜೀವದಾತ ವೈದ್ಯರಿಗೆ ಒಂದು ಕೃತಜ್ಞತೆ ಸಲ್ಲಿಸಿ

Doctors day
Published on

ಬೆಂಗಳೂರು: ಜೀವದಾತ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಪ್ರತಿವರ್ಷ ಜು.1ರಂದು ‘ರಾಷ್ಟ್ರೀಯ ವೈದ್ಯರ ದಿನ’ ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷ ‘ಗುಣಪಡಿಸುವ ಕೈಗಳು- ಕಾಳಜಿಹೊಂದಿರುವ ಹೃದಯಗಳು’ ಘೋಷವಾಕ್ಯದೊಂದಿಗೆ ಈ ದಿನವನ್ನು ಸಂಭ್ರಮಿಸಲಾಗುತ್ತಿದೆ.

ದೇಶದ ಪ್ರಸಿದ್ಧ ವೈದ್ಯ ಮತ್ತು ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿ ಡಾ. ಬಿಧನ್‌ಚಂದ್ರ ರಾಯ್ ನೆನಪಿನಲ್ಲಿ ಪ್ರತಿ ವರ್ಷ ಜು.1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮೆಡಿಕಲ್ ಕೌನ್ಸಿಲ್ ಆ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 1882ರ ಜು.1ರಂದು ಜನಿಸಿದ್ದ ರಾಯ್, 1962ರಲ್ಲಿ ಅದೇ ದಿನ ನಿಧನರಾದರು. ಹಾಗಾಗಿ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆ ದಿನವನ್ನು ರಾಷ್ಟ್ರೀಯ ವೈದ್ಯ ದಿನವೆಂದು ಘೋಷಿಸಿ 1991ರಿಂದ ಆಚರಿಸುತ್ತ ಬರಲಾಗಿದೆ.

ವೈದ್ಯರ ದಿನದ ಪ್ರಾಮುಖ್ಯತೆ: ನಿಸ್ವಾರ್ಥವಾಗಿ ಸಮುದಾಯಕ್ಕೆ ಸೇವೆ ಸಲ್ಲಿಸುವ ವೈದ್ಯರಿಗೆ ಕೃತಜ್ಞತೆ ವ್ಯಕ್ತಪಡಿಸಲು ವೈದ್ಯರ ದಿನ ಆಚರಿಸಲಾಗುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭವು ನಮ್ಮ ಜೀವನದಲ್ಲಿ ವೈದ್ಯರು ವಹಿಸುವ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದೆ. ಕಠಿಣಾತಿಕಠಿಣ ಪರಿಸ್ಥಿತಿ ಹಾಗೂ ಸವಾಲುಗಳ ನಡುವೆಯೂ ವೈದ್ಯರ ಅಚಲವಾದ ಸಮರ್ಪಣೆ ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಕೃತಜ್ಞತೆ ಸಲ್ಲಿಸಿ: ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ, ಅವರು ನೀಡಿದ ಸೇವೆಗೆ ಪ್ರತಿಯಾಗಿ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವೇದಿಕೆ ಕಲ್ಪಿಸಿರುವ ವೈದ್ಯರ ದಿನದಂದು ನಿಮ್ಮ ಬದುಕಿಗೆ ಬೆಳಕಾದ, ನಿಮಗೆ ಮರುಜನ್ಮ ನೀಡಿದ ವೈದ್ಯರಿಗೆ ಒಂದು ನಮನ ಸಲ್ಲಿಸಿ ಅವರನ್ನು ಪ್ರೋತ್ಸಾಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net