

ಬೆಂಗಳೂರು: ಹಲವಾರು ಪಾತ್ರಗಳು ಹಾಗೂ ಸನ್ನಿವೇಶಗಳು ಸೇರಿದಾಗ ಕಾದಂಬರಿ ಹುಟ್ಟುತ್ತದೆ ಎಂದು ಕಾದಂಬರಿಗಾರ್ತಿ ಎನ್. ಸಂಧ್ಯಾರಾಣಿ ಹೇಳಿದರು.
ನಗರದ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಲೇಖಕಿಯರ ಸಂಘ ಮತ್ತು ನ್ಯಾಷನಲ್ ಎಜುಕೇಷನ್ ಸೊಸೈಟಿ ಆ್ ಕರ್ನಾಟಕದ ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ‘’ನಾನು ಮತ್ತು ನನ್ನ ಕಾದಂಬರಿ ರಚನೆ’ (ಕಾದಂಬರಿಯ ರಚನೆಯ ಬಗ್ಗೆ ಕಾದಂಬರಿಗಾರ್ತಿಯರ ಚಿಂತನೆಗಳು ಮತ್ತು ಚರ್ಚೆ) ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಭಾವವೂ ಸಾಹಿತ್ಯದ ರೂಪ ಪಡೆದುಕೊಳ್ಳಬೇಕಾದರೆ, ಅದಕ್ಕೆ ಪೂರಕವಾದ ಸ್ವರೂಪ ಅಥವಾ ಮಾಧ್ಯಮವನ್ನು ಅದೇ ಹುಟ್ಟುಹಾಕುತ್ತದೆ. ಕೆಲವೊಮ್ಮೆ ನಮ್ಮ ಭಾವನೆಗಳು ಕವನಗಳಿಗೆ ಮಾತ್ರ ಮೀಸಲಾಗುತ್ತದೆ. ಇನ್ನು ಕೆಲವೊಮ್ಮೆ ಮತ್ತಷ್ಟು ಹೆಚ್ಚಿನ ವಿಚಾರವನ್ನು ಪಡೆದು ಕಾದಂಬರಿಯ ರೂಪ ಪಡೆದುಕೊಳ್ಳುತ್ತದೆ. ಅಂತಹ ಕಾದಂಬರಿಯ ಹುಟ್ಟಿಗೆ ಹಲವಾರು ಪಾತ್ರ ಹಾಗೂ ಸನ್ನಿವೇಶಗಳು ಸೇರಿರುತ್ತವೆ ಎಂದು ಹೇಳಿದರು.
ಕಾದಂಬರಿಗಾರ್ತಿ ಆಶಾ ರಘು ಮಾತನಾಡಿ, ಕಾದಂಬರಿಯ ಪ್ರಕ್ರಿಯೆ ಒಂದು ಶೋಧ ಕಾರ್ಯ ಎಂದನಿಸುತ್ತದೆ. ವಿಶಾಲ ವ್ಯಾಪ್ತಿಯಲ್ಲಿ ವಿಸ್ತರಿಸುತ್ತಾ ಸಾಗುವಾಗ ವಿವರಗಳೊಂದಿಗೆ ಪಾತ್ರಗಳ ಮನೋಭೂಮಿಕೆಯ ಆಳವನ್ನು ಶೋಧಿಸುತ್ತ ಹೋಗುವ ಕ್ರಮ ಇದಾಗಿದೆ. ಜಗತ್ತಿನಲ್ಲಿ ಮಾನವ ಮತ್ತು ಪ್ರಕೃತಿ, ಮಾನವ ಮತ್ತು ಮಾನವ ಹಾಗೂ ಮಾನವ ಮತ್ತು ಅವರ ಅಂತರಂಗ ಎಂದು ಮೂರು ರೀತಿಯ ಮುಖಾಮುಖಿಯನ್ನು ಕಾಣಬಹುದು. ಅದರಲ್ಲಿ ಕಡೆಯದು ಕಾದಂಬರಿ ರಚಿಸುವಾಗ ನನಗೆ ಕಾಣಿಸುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್. ಎಲ್. ಪುಷ್ಪ ಮಾತನಾಡಿ, ಇಂದು ಬರೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಲೇಖಕಿಯರು ಇಂದು ಕಥನ ಪ್ರಕಾರಕ್ಕೆ ಒಲಿದು ಬರೆಯುತ್ತಿದ್ದಾರೆ. ಲಿಂಗ ಸಮಾನತೆಯನ್ನು ಕುರಿತು ಮಾತನಾಡುವ ‘ದ್ವಿತ್ವ’ , ಅಂಡಮಾನ್ ದ್ವೀಪದಲ್ಲಿ ಸೆರೆಯಾದ ಸ್ವಾತಂತ್ರ ಹೋರಾಟಗಾರರನ್ನು ಕುರಿತು ಬರೆದ ‘ಕರಿನೀರು’ ಮುಂತಾದ ಕಾದಂಬರಿಗಳು ಸಹ ಶ್ರೇಷ್ಠವಾದ ಕೃತಿಗಳಾಗಿವೆ. ಆದರೆ ಅವುಗಳ ಸುತ್ತ ನಡೆಯಬೇಕಾದ ಚರ್ಚೆಗಳು ನಡೆದಿಲ್ಲ. ವಿಮರ್ಶೆ ಇಂತಹ ಶ್ರೇಷ್ಠ ಕೃತಿಗಳನ್ನು ಪರಿಗಣಿಸಿಲ್ಲವೇ? ಕೇವಲ ಮಹಿಳೆಯರದೆಂದು ದೂರವಿರಿಸುತ್ತಿದೆಯೇ? ಎಂಬ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಹಾಗಾಗಿ ಲೇಖಕಿಯರ ಕೃತಿಗಳ ಕುರಿತು ಪೂರ್ವಾಪರವಿಲ್ಲದ ಮುಕ್ತ ಮನಸ್ಸಿನ ಚರ್ಚೆಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ವೈ.ಸಿ. ಕಮಲಾ, ನ್ಯಾಷನಲ್ ಕಾಲೇಜಿನ ಪಿ.ಎಲ್. ರಮೇಶ್, ಕಾದಂಬರಿಗಾರ್ತಿಯರಾದ ಲತಾಗುತ್ತಿ, ಹೆಚ್.ಆರ್. ಸುಜಾತ, ಆರ್‌ಸುನಂದಮ್ಮ ಇತರರು ಇದ್ದರು.