ವಿಭಾಗೀಯ ಕೇಂದ್ರಗಳಲ್ಲಿ ನಾಟಕೋತ್ಸವ

K.V.Nagraj Murthy
Published on

ಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಹೇಳಿಕೆ | ನಾಟಕ ರಚನಾ ತರಬೇತಿ ಶಿಬಿರ ಆಯೋಜನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಕೇಂದ್ರ ಸ್ಥಾನದಲ್ಲಿ ಮೂರು ದಿನದ ನಾಟಕೋತ್ಸವ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಹೇಳಿದರು.
ಆಯಾ ವಿಭಾಗ ವ್ಯಾಪ್ತಿಯ ಜಿಲ್ಲೆಗಳ ರಂಗಭೂಮಿ ಬೆಳವಣಿಗೆ ಕುರಿತ ವಿಚಾರ ಸಂಕಿರಣ ಏರ್ಪಡಿಸಿ ಕಳೆದ ೫೦ ವರ್ಷದ ರಂಗಭೂಮಿ ಅಭಿವೃದ್ಧಿಯನ್ನು ದಾಖಲಿಸುವುದಾಗಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ೧೬ ಜಿಲ್ಲೆಗಳಲ್ಲಿ ಪ್ರತಿ ಕಂದಾಯ ವಿಭಾಗಕ್ಕೆ ೪ರಂತೆ ಕಾಲೇಜು ವಿದ್ಯಾರ್ಥಿ ರಂಗತರಬೇತಿ ಶಿಬಿರ ನಡೆಸಲಾಗುವುದು. ರಾಜ್ಯ, ರಾಷ್ಟç ಮಟ್ಟದಲ್ಲಿ ಹೆಸರು ಮಾಡಿರುವ ನಿರ್ದೇಶಕರನ್ನು ಶಿಬಿರಕ್ಕಾಗಿ ಬಳಸಿಕೊಳ್ಳಲಾಗುವುದು. ಆಸಕ್ತ ಕಾಲೇಜುಗಳಲ್ಲಿ ಈ ಶಿಬಿರ ಆಯೋಜಿಸಿ ನಿರ್ದೇಶಕರ ಸಂಭಾವನೆ, ವಾಸ್ತವ್ಯ ವೆಚ್ಚವನ್ನು ಅಕಾಡೆಮಿ ಭರಿಸಲಿದೆ ಎಂದರು.
ಡಿಸೆAಬರ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳ ನಾಟಕೋತ್ಸವ ಜತೆಗೆ ಜಿಲ್ಲೆಗೊಂದು ನಾಟಕ ಒಳಗೊಂಡAತೆ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಟಕ ಸ್ಪರ್ಧೆ ಆಯೋಜಿಸಲಾಗುವುದು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚ, ವಿಜೇತ ತಂಡಗಳಿಗೆ ಮೊದಲ ಬಹುಮಾನ ೫೦ ಸಾವಿರ ರೂ, ದ್ವಿತೀಯ ೩೦ ಸಾವಿರ ಮತ್ತು ತೃತೀಯ ಬಹುಮಾನ ೨೦ ಸಾವಿರ ರೂ. ನೀಡುವುದಾಗಿ ತಿಳಿಸಿದರು.
ಕನ್ನಡದ ಹೊಸ ನಾಟಕಗಳ ಕೊರತೆ ನೀಗಿಸುವ ದೃಷ್ಟಿಯಿಂದ ಏಳು ದಿನದ ನಾಟಕ ರಚನಾ ತರಬೇತಿ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಕುವೆಂಪು ಜನ್ಮಸ್ಥಳ ಕುಪ್ಪಳ್ಳಿಯಲ್ಲಿ ಆಯೋಜಿಸಿದ್ದು, ೨೦-೪೦ ವರ್ಷದ ೩೦ ಜನ ಭಾಗವಹಿಸಬಹುದು. ಉಚಿತ ವಸತಿ, ಊಟದ ವ್ಯವಸ್ಥೆ ಇರಲಿದ್ದು, ನಿಯಮಾನುಸಾರ ಪ್ರಯಾಣ ವೆಚ್ಚ ನೀಡಲಾಗುವುದು ಎಂದು ವಿವರಿಸಿದರು.
ನಶಿಸುತ್ತಿರುವ ಪೌರಾಣಿಕ ನಾಟಕ ಆಧುನಿಕವಾಗಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮೂರು ದಿನದ ನಾಟಕೋತ್ಸವ ಮತ್ತು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪೌರಾಣಿಕ ರಂಗತರಬೇತಿ ಶಿಬಿರ ಆಯೋಜಿಸಲಾಗುವುದು. ಕಳೆದ ೭೫ ವರ್ಷ ಸೇರಿ ಪ್ರಸ್ತುತ ರಂಗಭೂಮಿಯ ದಾಖಲಾತಿಗಳ ಗಣಕೀಕರಣ ಮಾಡಲಾಗುತ್ತಿದ್ದು, ಇದಕ್ಕೆ ಅನುಕೂಲವಾಗುವಂತೆ ರಂಗಭೂಮಿ ಆಸಕ್ತರು ಅವರಲ್ಲಿರುವ ರಂಗ ಮಾಹಿತಿಯನ್ನು ಅಕಾಡೆಮಿ ಜತೆ ಹಂಚಿಕೊಳ್ಳಬಹುದು ಎಂದರು.
ನಾಟಕ ರಚನಾ ಸ್ಪರ್ಧೆ: ರಾಜ್ಯದಲ್ಲಿ ನಾಟಕಕಾರರಾಗಿ ಹೆಸರು ಮಾಡಿರುವ ಮತ್ತು ಉದಯೋನ್ಮುಖ ನಾಟಕಕಾರರಿಗೆ ನಾಟಕ ರಚನಾ ಸ್ಪರ್ಧೆ ಯೋಜನೆಯನ್ನು ಜನವರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ೨೦-೩೦ ವರ್ಷದ ಉದಯೋನ್ಮುಖ ಬರಹಗಾರರಿಗೆ ಪ್ರತ್ಯೇಕ ನಗದು ಬಹುಮಾನವನ್ನು ಈ ಯೋಜನೆ ಒಳಗೊಂಡಿದೆ. ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ನಾಟಕಗಳ ಪ್ರದರ್ಶನ ಬೆಂಗಳೂರಿನಲ್ಲಿ ಪ್ರತಿ ತಿಂಗಳ ೩ನೇ ಶನಿವಾರ ಕಲಾಗ್ರಾಮದ ಸಮುಚ್ಚಯದಲ್ಲಿ ನಡೆಸಿ ಭಾಗವಹಿಸುವ ತಂಡಗಳಿಗೆ ಊಟ, ವಸತಿ ಜತೆಗೆ ಗೌರವ ಸಂಭಾವನೆ ನೀಡಲಾಗುವುದು ಎಂದು ಕೆ.ವಿ. ನಾಗರಾಜ ಮೂರ್ತಿ ತಿಳಿಸಿದರು.
ಅಕಾಡೆಮಿ ಸದಸ್ಯ ಜೇವರ್ಗಿ ರಾಜಣ್ಣ, ಅಪ್ಪಾರಾವ್ ಅಕ್ಕೋಣಿ, ಡಾ.ಸ್ವಾಮಿರಾವ್ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net