

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನಗರಸಭೆ ನೂತನ ಕಚೇರಿ ಕಟ್ಟಡ ನಿರ್ಮಿಸಲು ಕಾಲ ಕೂಡಿ ಬಂದಿಲ್ಲ. ಅನಿವಾರ್ಯವಾಗಿ ಇಕ್ಕಟ್ಟಿನ ಕಿರಿದಾದ ಸಭಾಂಗಣದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.
ಕಳೆದ ಒಂದೂವರೆ ದಶಕದಿಂದಲೂ ಹೈಟೆಕ್ ಕಚೇರಿಯ ಅಗತ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಸ್ತುತ ನಗರದ ಭುವನೇಶ್ವರಿ ವೃತ್ತದಲ್ಲಿರುವ ಹಳೇ ಜ್ಯುಬಿಲಿ ಹಾಲ್‌ನಲ್ಲಿಯೇ ನಗರಸಭೆ ಕಚೇರಿ ಕಾರ್ಯ ನಿರ್ವಹಿಸುತ್ತಿದೆ.
ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡವು ಮಳೆ ಬಂದಾಗ ಸೋರುತ್ತದೆ. ಅಲ್ಲದೆ, ಇಂದಿನ ನಗರದ ಬೆಳವಣಿಗೆ ಹೋಲಿಸಿದರೆ ಕಿರಿದಾಗಿದೆ. ಇದರಿಂದ ದಾಖಲೆ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಕಿರಿಕಿರಿಯಾಗುತ್ತಿದೆ. ಇದರ ಬಗ್ಗೆ ಅಸಮಾಧಾನ ವ್ಯಕ್ತವಾದಾಗ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಂಡು ತೃಪ್ತಿಪಡಿಸಲಾಗುತ್ತಿದೆ.
ಇಕ್ಕಟ್ಟಿನ ಕೆಲಸ
ಸರ್ ಎಂ.ವಿ. ಸಭಾಂಗಣ, ಹಿಂಭಾಗ ಶೌಚಗೃಹ, ಪೌರ ಕಾರ್ಮಿಕರ ವಿಶ್ರಾಂತಿ ಭವನ ನಿರ್ಮಿಸಲಾಗಿದೆ. ಆದರೆ, ಪರಿಸರ, ನೈರ್ಮಲ್ಯ, ಆಡಳಿತ ಸ್ನೇಹಿ ಕಚೇರಿ ವಾತಾವರಣ ಇಲ್ಲ. ಅಡ್ಡಾದಿಡ್ಡಿ ವಾಹನ ನಿಲುಗಡೆ, ಪರಿಕರಗಳ ದಾಸ್ತಾನು, ಎಲ್ಲೆಂದರಲ್ಲಿ ವಿವಿಧ ವಿಭಾಗಗಳ ಕಚೇರಿಗಳ ಕಾರ್ಯ ನಿರ್ವಹಣೆಯು ಕಿರಿಕಿರಿಗೆ ಕಾರಣವಾಗಿದೆ. ಜನನ ಮತ್ತು ಮರಣ ನೋಂದಣಿ, ಪರಿಸರ ಮತ್ತು ಆರೋಗ್ಯ ವಿಭಾಗ, ಆಸ್ತಿ ಖಾತೆ ಮತ್ತು ತೆರಿಗೆ ದಾಖಲೆಗಳು, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ಪೌರಾಯುಕ್ತರ ಕಚೇರಿಯೂ ಸಣ್ಣ ಜಾಗದಲ್ಲಿವೆ.
ವಿವಿಧ ಸ್ಥಳ ಪರಿಶೀಲನೆ
ನೂತನ ಕಟ್ಟಡ ನಿರ್ಮಾಣಕ್ಕೆ ಜಾಗಗಳ ನಿರಂತರ ಪರಿಶೀಲನೆ, ಬದಲಾವಣೆ ಕೆಲಸವಾಗುತ್ತಿದೆ. ಮೊದಲು ಈಗ ನಿರ್ಮಿಸಲಾಗಿರುವ ಕನ್ನಡ ಕಲಾಭವನ ಜಾಗ, ಬಳಿಕ ಅಣಕನೂರು ಬಳಿಯ ಅಮಾನಿ ಗೋಪಾಲಕೃಷ್ಣ ಕೆರೆ ಪ್ರದೇಶ, ನಗರದ ಡಿವೈನ್ ಸಿಟಿ ಬಡಾವಣೆಯಲ್ಲಿನ ಸಾರ್ವಜನಿಕ ಬಳಕೆಗಿರುವ ಉದ್ದೇಶಿತ ಜಾಗವನ್ನು ಆಯ್ಕೆಗೆ ಪರಿಗಣಿಸಲಾಗಿತ್ತು. ಈಗ ಪಾಳುಬಿದ್ದಿರುವ ಹಳೇ ಸಿಟಿಜನ್ ಕ್ಲಬ್ ಸ್ಥಳವನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಹಿಂದೆ ಹೊಸ ಕಟ್ಟಡಕ್ಕೆ ಅಮಾನಿ ಗೋಪಾಲಕೃಷ್ಣ ಕೆರೆಯ ಪ್ರದೇಶದಲ್ಲಿನ ಒಂದು ಎಕರೆ ಜಾಗ ಗುರುತಿಸಲಾಗಿತ್ತು. ಆದರೆ, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದರು. ಇದರ ಜತೆಗೆ ಕಾರ್ಯಪಾಲಕ ಅಭಿಯಂತರು ಕಟ್ಟಡ ನಿರ್ಮಾಣಕ್ಕೆ ಸ್ಥಳ ಯೋಗ್ಯವಲ್ಲ ಎಂಬ ಮಾತು ಹೇಳಿದ್ದರು. ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿರುವ ಡಿವೈನ್ ಸಿಟಿಯ 1 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಅವೈಜ್ಞಾನಿಕ ಬಡಾವಣೆ ಎನ್ನಲಾಗುತ್ತಿದೆ. ಹೀಗೆ ಅಪಸ್ವರಗಳ ನಡುವೆ ನಾನಾ ವಿಘ್ನಗಳು ಎದುರಾಗಿವೆ.
ಕಟ್ಟಡದ ನೀಲಿನಕ್ಷೆ, ಅನುದಾನ
ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಸಂಸದರು, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಮತ್ತು ರಾಜ್ಯ ಸರ್ಕಾರದ ವಿಶೇಷ ಅನುದಾನ ಸೇರಿ ಇತರ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಿ ಸುಮಾರು 10ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಯೋಜನೆಯನ್ನು ಈ ಹಿಂದೆ ರೂಪಿಸಲಾಗಿತ್ತು. 31 ವಾರ್ಡ್ ಹೊಂದಿರುವ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 63,652 (2011ರ ಜನಗಣತಿ ಪ್ರಕಾರ) ಜನಸಂಖ್ಯೆ ಇದ್ದು, ಈಗಾಗಲೇ ಹೊಸ ಕಟ್ಟಡ ನಿರ್ಮಿಸಲು ನಗರಸಭೆ ಕೌನ್ಸಿಲ್ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ ಎರಡು ಕೋಟಿ ರೂ. ಸಹ ಬಿಡುಗಡೆ ಮಾಡಿತ್ತು.
"ಚಿಕ್ಕಬಳ್ಳಾಪುರ ನಗರಸಭೆ ನೂತನ ಕಟ್ಟಡವನ್ನು ನಿರ್ಮಿಸುವುದರಿಂದ ಉತ್ತಮ ಆಡಳಿತ ನಿರ್ವಹಣೆ, ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಅನುಕೂಲವಾಗುತ್ತದೆ." - ಆರ್.ಮಟಮಪ್ಪ, ನಗರಸಭೆ ಸದಸ್ಯ, ಚಿಕ್ಕಬಳ್ಳಾಪುರ