

ಬಂಟ್ವಾಳ: ಗ್ರಾಮಸ್ಥರು ಭಾಗವಹಿಸದೆ ಇರುವ ಗ್ರಾಮಸಭೆ ಅಪೂರ್ಣ ಎಂದು ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಸೋಮವಾರ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ರೋಟರಿ ಸಭಾಭವನದಲ್ಲಿ, ನರಿಕೊಂಬು ಗ್ರಾಮ ಪಂಚಾಯಿತಿಯ ದ್ವಿತೀಯ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಸ್ಥರಿಗೆ ವಿವಿಧ ಇಲಾಖೆಗಳ ಮಾಹಿತಿ ನೀಡುವ ಸಲುವಾಗಿ ಎಲ್ಲ ಇಲಾಖೆಗಳು ಹಾಜರಿದ್ದರೂ ಗ್ರಾಮಸ್ಥರೇ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವುದರಿಂದ ಗ್ರಾಮಸಭೆಯು ಪರಿಪೂರ್ಣ ಆಗಲು ಸಾಧ್ಯವಿಲ್ಲ. ಈ ದೃಷ್ಟಿಯಲ್ಲಿ ಮುಂದಿನ ಗ್ರಾಮ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಬರುವ ಹಾಗೆ, ವ್ಯಾಪ್ತಿಯ ಪಂಚಾಯಿತಿ ಸದಸ್ಯರ ಜತೆಗೆ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ಅರಣ್ಯ ವಲಯ ಬಂಟ್ವಾಳದ ಉಪವಲಯ ಅರಣ್ಯಾಧಿಕಾರಿ ಕೃಷ್ಣಜೋಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಮೆಸ್ಕಾಂ, ಆರೋಗ್ಯ ಇಲಾಖೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ, ಪಶು ಸಂಗೋಪನಾ ಇಲಾಖೆ, ಪೊಲೀಸ್ ಇಲಾಖೆಗಳಿಂದ ಮಾಹಿತಿ ನೀಡಲಾಯಿತು. ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಉಪಾಧ್ಯಕ್ಷೆ ಮೋಹಿನಿ, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮ ವ್ಯಾಪ್ತಿಯ ಆರೋಗ್ಯ ಸಂರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಗ್ರಾಮಸ್ಥರು ಭಾಗವಹಿಸಿದ್ದರು. ಪಿಡಿಒ ಹರೀಶ್ ಕೆ.ಎ. ಸ್ವಾಗತಿಸಿ, ವಂದಿಸಿದರು.