ಗೃಹಲಕ್ಷ್ಮೀಗಾಗಿ ಮುಗಿಬಿದ್ದ ನಾರಿಯರು..!

Nari who fell for Grilahakshmi..!
ಬಾಗಲಕೋಟೆ ನಗರದಲ್ಲಿ ಗೃಹಲಕ್ಷ್ಮೀಗಾಗಿ ಅರ್ಜಿ ಸಲ್ಲಿಸಲು ಮುಗಿಬಿದ್ದಿರುವ ಮಹಿಳೆಯರು.
Published on

ಬಾಗಲಕೋಟೆ: ಕಾಂಗ್ರೆಸ್ ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ನಾರಿಯರು ಮುಗಿಬಿದ್ದಿದ್ದಾರೆ. ಶಕ್ತಿ ಯೋಜನೆ ಬಳಿಕ ಕೋಟೆನಾಡಲ್ಲಿ ಗೃಹಲಕ್ಷ್ಮೀಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.

ಯೋಜನೆಗೆ ಅರ್ಜಿ ಸಲ್ಲಿಸಲು ವಿವಿಧೆಡೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯೋಜನೆ ಆರಂಭವಾದ ಕೆಲವೇ ದಿನಗಳಲ್ಲಿ ನೋಂದಣಿ ಪ್ರಮಾಣ ಶೇ.50ರ ಆಸುಪಾಸು ಬಂದು ತಲುಪಿದೆ. ನಾಡ ದೊರೆ ಸಿದ್ದರಾಮಯ್ಯ ಚಾಲನೆ ನೀಡಿದ ಬಳಿಕ ಈವರೆಗೆ ಜಿಲ್ಲೆಯಲ್ಲಿ 2,09,081 ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಮಳೆಯ ಆರ್ಭಟ ನಡುವೆಯೂ ಪ್ರತಿ ತಿಂಗಳು ನೀಡುವ 2 ಸಾವಿರ ರೂ.ಗಾಗಿ ಭರ್ಜರಿ ಕ್ಯೂ ಕಂಡು ಬಂದಿದೆ.

4 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್: ಕಂದಾಯ ಇಲಾಖೆ ಕುಟುಂಬ ಮಾಹಿತಿ ಒಂದು ಕಡೆಯಾದರೆ ಜಿಲ್ಲೆಯಲ್ಲಿ 46,175 ಅಂತ್ಯೋದಯ, 63,012 ಎಪಿಎಲ್ ಹಾಗೂ 3,72,332 ಬಿಪಿಎಲ್ ಸಹಿತ ಒಟ್ಟು 4,81,519 ವಿವಿಧ ಹಂತದ ಪಡಿತರ ಕಾರ್ಡ್‌ಗಳಿವೆ. ಅದರಲ್ಲಿ ವಾರದೊಳಗೆ ಹೆಚ್ಚಿನ ಮಹಿಳೆಯರು ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಇನ್ನು ಸರ್ವರ್ ಸಮಸ್ಯೆಯಿಂದ ಕಿರಿಕಿರಿ ಉಂಟಾಗಬಾರದು ಎನ್ನುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆಗೆ ಸರ್ಕಾರ ಒಂದು ಕೇಂದ್ರಕ್ಕೆ 2 ಸರ್ವರ್, 1 ಮೊಬೈಲ್ ಆ್ಯಪ್ ಹಾಗೂ 1 ವಾಟ್ಸ್ ಆ್ಯಪ್ ಮೂಲಕ ನೋಂದಣಿ ಮಾಡಲು ಅವಕಾಶ ನೀಡಿದೆ. ಇದರಿಂದ ಅರ್ಜಿದಾರರು ನಿರಾಳರಾಗಿದ್ದಾರೆ.

ಹಣ ಪಡೆದ 5 ಕೇಂದ್ರಗಳ ಮೇಲೆ ದಾಳಿ : ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಲು ಗ್ರಾಪಂ ಕೇಂದ್ರ ಕಚೇರಿಯಲ್ಲಿರುವ 195 ಬಾಪೂಜಿ ಸೇವಾ ಕೇಂದ್ರ, 129 ಗ್ರಾಮ ಒನ್ ಕೇಂದ್ರಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿರುವ 54 ಕೇಂದ್ರಗಳು ಸೇರಿ ಒಟ್ಟು 378 ನೋಂದಣಿ ಕೇಂದ್ರಗಳ ಮೂಲಕ ನೋಂದಣಿ ಮಾಡಲಾಗುತ್ತಿತ್ತು. ಆದರೆ, ಹಲವು ಕಡೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿತ್ತು. ಇದನ್ನು ಮನಗಂಡ ಅಧಿಕಾರಿಗಳು ಕೇಂದ್ರಗಳ ಮೇಲೆ ದಾಳಿ ನಡೆಸಿದಾಗ ಸತ್ಯಾಂಶ ಹೊರಗೆ ಬಿದ್ದಿದೆ. ಹೀಗಾಗಿ ಹಣದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ, ಬಾಗಲಕೋಟೆ ತಾಲೂಕಿನ ಶಿಗಿಕೇರಿ ಹಾಗೂ ಬೇವಿನಮಟ್ಟಿ, ಜಮಖಂಡಿ ತಾಲೂಕಿನ ಶೂರ್ಪಾಲಿ ಮತ್ತು ಜಮಖಂಡಿ ನಗರಸಭೆಯಲ್ಲಿನ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ತಂತ್ರಾಂಶ ಬಳಕೆಗೆ ಕಡಿವಾಣ ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net