

ತುಮಕೂರು : ಈ ಬಾರಿ ಬಜೆಟ್ ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಸಾಧಿಸಿದ ಆರ್ಥಿಕ ಪ್ರಗತಿಯಿಂದ ಮೂಡಿದ ಆತ್ಮವಿಶ್ವಾಸದ ಪ್ರತೀಕದಂತೆ ಇದೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಹೇಳಿದರು.
ಇದಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಆಗಿರುವ ಹೆಚ್ಚಳವೇ ಪ್ರಮುಖ ಕಾರಣ. ಈ ವರ್ಷ 1.66 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಇದು ಇಡೀ ದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಭಾರಿ ಉತ್ತೇಜನ ಸಿಗಲಿದೆ. ಮಧ್ಯಂತರ ಬಜೆಟ್ ಮಂಡಿಸುವಾಗಲೇ ಜುಲೈನಲ್ಲಿ ಮತ್ತೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಮರಳಿ ಅಧಿಕಾರಕ್ಕೆ ಬರುತ್ತೇವೆ ಎಂಬ ದೃಢ ನಂಬಿಕೆಗೆ ಸಾಕ್ಷಿ ಎನಿಸಿದೆ ಎಂದು ತಿಳಿಸಿದರು.
2014 ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಇದ್ದ ಆರ್ಥಿಕ ಅಶಿಸ್ತು ಮತ್ತು ಬೇಜವಾಬ್ದಾರಿ ಕುರಿತು ಶ್ವೇತಪತ್ರ ಹೊರಡಿಸುವುದಾಗಿ ನಿರ್ಮಲಾ ಸೀತಾರಾಮನ್ ಅವರು ಹೇಳಿರುವುದರಲ್ಲಿಯೂ ಈ ಸರ್ಕಾರ ತನ್ನ ಸಾಧನೆಯಲ್ಲಿ ಹೊಂದಿರುವ ನಂಬಿಕೆ ಎದ್ದು ಕಾಣುತ್ತದೆ ಎಂದರು.
ಬಜೆಟ್‌ನಲ್ಲಿ ಮಂಡಿಸಿರುವ ವಿವಿಧ ಜನಪರ ಕಾರ್ಯಕ್ರಮಗಳು ಹಾಗೂ ಎಲ್ಲ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಆಧುನಿಕ ಮೂಲಸೌಕರ್ಯಗಳ ಜತೆಗೆ ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಸಾಧಿಸುವುದನ್ನು ಅವರು ಪ್ರಸ್ತಾಪಿಸಿದ್ದಾರೆ. ಇದು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ನಿಲ್ಲಿಸುವ ದೃಢ ವಿಶ್ವಾಸದ ಪುನರುಚ್ಚಾರವಾಗಿದೆ. ಮತ್ತು ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತ ಸಾಧಿಸಲಿರುವ ವಿಕಸಿತ ಭಾರತದ ಮುನ್ನುಡಿಯಾಗಿದೆ ಎಂದು ತಿಳಿಸಿದರು.