

ಕನಕಪುರ : ಗ್ರಾಮಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ಪ್ರಸಕ್ತ ಸಾಲಿಗೆ ಮತ್ತಷ್ಟು ಅಭಿವೃದ್ಧಿ ಕಾಣಲು ನರೇಗಾ ಕ್ರಿಯಾ ಯೋಜನೆ ಪಟ್ಟಿ ಸಿದ್ಧತೆಗೆ ಗ್ರಾಮಸಭೆ ಆಯೋಜಿಸಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಎನ್.ಎಸ್.ಕೃಷ್ಣಮೂರ್ತಿ ಹೇಳಿದರು.
ಶಿವನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ನರೇಗಾ ಅನುಷ್ಠಾನ ಕಾಮಗಾರಿ ಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, 2023-24ನೇ ಸಾಲಿನಲ್ಲಿ 460 ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳಿಗೆ 3.16 ಕೋಟಿ ರೂ. ವಿನಿಯೋಗಿಸಲಾಗಿತ್ತು. 2024-25ನೇ ಸಾಲಿನಲ್ಲಿ 201 ಕಾಮಗಾರಿಗಳಿಗೆ 2.12 ಕೋಟಿ ರೂ.ನಲ್ಲಿ ನರೇಗಾ ಯೋಜನೆ ಅಭಿವೃದ್ಧಿ ಹೊಂದಲಾಗಿದೆ. ಪ್ರಸಕ್ತ ಸಾಲಿನ ಅಭಿವೃದ್ಧಿ ಕಾರ್ಯಗಳಿಗೆ ವಾರ್ಡ್ ಸಭೆಗಳನ್ನು ನಡೆಸಿ ಪಟ್ಟಿ ತಯಾರಿಸಿ ಇಂದು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ನರೇಗಾ ಯೋಜನೆಯನ್ನು ಪ್ರತಿಯೊಬ್ಬ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನರೇಗಾ ಇಂಜಿನಿಯರ್ ಭರತ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾರದರ್ಶಕತೆ ತರಲು ಈ ವರ್ಷದಿಂದ ಮೊದಲ ಬಾರಿಗೆ ನರೇಗಾ ಕ್ರಿಯಾ ಯೋಜನೆಯನ್ನು ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿಯೇ ಕ್ರೀಯಾಯೋಜನೆ ಸೇರಿಸಲು ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ಮೊದಲಿನಂತೆ ಕ್ರಿಯಾ ಯೋಜನಾ ಪಟ್ಟಿಯನ್ನು ನಿಗದಿತ ಸಮಯದೊಳಗಾಗಿ ಸಿದ್ಧಪಡಿಸಿ ನೋಂದಣಿ ಮಾಡಿದರೆ ಮಾತ್ರ ಯೋಜನೆಗಳಿಗೆ ಸರ್ಕಾರದಿಂದ ಮಂಜೂರಾತಿ ದೊರೆಯುತ್ತದೆ. ಇನ್ನು ಮುಂದೆ ಮನಬಂದಂತೆ ಕ್ರಿಯಾ ಯೋಜನೆ ಪಟ್ಟಿ ಸೇರಿಸುವಂತಿಲ್ಲ. ಇದನ್ನು ಫಲಾನುಭವಿಗಳು ಗಮನದಲ್ಲಿಟ್ಟುಕೊಂಡು ಸಕಾಲಕ್ಕೆ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಸೇರಿಸಬೇಕು ಎಂದರು.
ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖೆಯ ನಾರಾಯಣ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ರತ್ನಾಬಾಯಿ, ಕಾರ್ಯದರ್ಶಿ ಪುಟ್ಟಸ್ವಾಮಿ, ಸದಸ್ಯರಾದ ರುಕ್ಮಿಣಿ, ಆನಂದ್, ಕವಿತಾ, ಶಿವಮ್ಮ, ಗೌರಿಬಾಯಿ ಹಾಗೂ ಗ್ರಾಮಸ್ಥರು ಇದ್ದರು.