

ಮಾಗಡಿ : ರೈತರಿಗೆ ನರೇಗಾ ಯೋಜನೆ ವರದಾನವಾಗಿದೆ ಎಂದು ಹಂಚಿಕುಪ್ಪೆ ಗ್ರಾಪಂ ಅಧ್ಯಕ್ಷೆ ಶನಾಜ್ ಬಾನು ಹೇಳಿದರು.
ತಾಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕಪರಿಶೋಧನೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಗಳ ರೈತರು, ನಾಗರಿಕರು ಬದು ನಿರ್ಮಾಣ, ಕೃಷಿ ಹೊಂಡ, ಶೌಚಗೃಹ, ಸಸಿ ನೆಟ್ಟುಕೊಳ್ಳಲು, ಇಂಗು ಗುಂಡಿ, ಕಾಂಕ್ರಿಟ್ ರಸ್ತೆ, ಕಣ ನಿರ್ಮಾಣ, ಕಾಂಪೌಂಡ್ ನಿರ್ಮಿಸಿಕೊಳ್ಳಲು ಇನ್ನೊಂದು ವಾರದ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಲು ಅವಕಾಶವಿದ್ದು, ನಿಗದಿತ ಸಮಯದಲ್ಲಿ ಅರ್ಜಿಸಲ್ಲಿಸಿ ಸಾಮೂಹಿಕ, ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದರು.
ಸದಸ್ಯ ವಿ.ಸಿ.ಜಯಣ್ಣ ಮಾತನಾಡಿ, ಗ್ರಾಮಗಳಲ್ಲಿ ನಡೆಸಲಾಗುತ್ತಿರುವ ಜೆಜೆಎಂ ಕಾಮಗಾರಿಯ ಪೈಪ್‌ಲೈನ್ ಅಳವಡಿಸಲು ತೆಗೆದ ಗುಂಡಿ ಮುಚ್ಚಿಲ್ಲ. ಇದರಿಂದ ಗ್ರಾಮದ ರಸ್ತೆಗಳೆಲ್ಲ ಗುಂಡಿಮಯವಾಗಿದ್ದು ವೃದ್ದರು, ನಾಗರಿಕರು ಪ್ರತಿ ದಿನ ಗುಂಡಿಗಳಿಗೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮನೆಗಳಿಗೆ ಸಂಪರ್ಕ ಕಲ್ಪಿಸುವ ನಲ್ಲಿ ಅಳವಡಿಸಿಲ್ಲ, ಓವರ್ ಹೆಡ್ ಟ್ಯಾಂಕ್‌ಗಳನ್ನು ಕ್ಯೂರಿಂಗ್ ಮಾಡಿಲ್ಲ. ಪೈಪ್‌ಲೈನ್ ಅಳವಡಿಸಿಲ್ಲ ಎಂದು ದೂರಿದರು.
ಚುನಾಯಿತ ಪ್ರತಿನಿಧಿಗಳ ಗಣನೆಗೆ ತೆಗೆದುಕೊಳ್ಳದೆ, ತಮಗೆ ಇಚ್ಛೆ ಬಂದಂತೆ ಕಾಮಗಾರಿ ಮಾಡಿ ಸರ್ಕಾರದ ಕೋಟ್ಯಂತರ ರೂ.ಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಇದರಿಂದ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಸಮರ್ಪಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ಒತ್ತಾಯಿಸಿದರು.
ಪಿಡಿಒ ಬಿ.ಕೆ. ಅಂಜನ್ ಮೂರ್ತಿ ಮಾತನಾಡಿ, ನರೇಗಾ ಯೋಜನೆಯಡಿ ಕಾಮಗಾರಿ ನಡೆಸಿ ಬಿಲ್ಲು ಪಡೆದ ಫಲಾನುಭವಿಗಳು ಕಾಮಗಾರಿಗಳನ್ನು ತೆರವುಗೊಳಿಸದೆ ಸದುಪಯೋಗಪಡಿಸಿಕೊಳ್ಳಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆಗೆ ಒತ್ತು ನೀಡಬೇಕು. ನೀರು, ರಸ್ತೆ, ಚರಂಡಿ, ದೀಪದ ವ್ಯವಸ್ಥೆಗೆ ತೊಂದರೆ ಉಂಟಾಗಿದ್ದರೆ ಗ್ರಾಪಂಗೆ ತಿಳಿಸುವ ಕಾರ್ಯವಾಗಬೇಕು. ಸರ್ಕಾರಿ ಕೆರೆ, ಕಟ್ಟೆ, ಗೋಮಾಳಗಳನ್ನು ಪತ್ತೆ ಮಾಡಿ ಸಂರಕ್ಷಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ನಾಲಾ ಅಭಿವೃದ್ಧಿ, ಕೆರೆ ಹೂಳೆತ್ತಲು, ಕೆರೆಗಳ ಅಭಿವೃದ್ಧಿಗೆ ವಿಶೇಷವಾಗಿ ಒತ್ತು ನೀಡುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ಚಿತ್ರಾ, ಸದಸ್ಯರಾದ ಉಮೇಶ್, ಶೋಭಾ, ಗಂಗಲಕ್ಷ್ಮಮ್ಮ, ಇಂದ್ರಮ್ಮ, ಪುಷ್ಪಲತಾ, ಡಿ.ಸಿ. ನರಸಿಂಹಯ್ಯ, ಶಿಲ್ಪಾ, ಶಿವಕುಮಾರ್, ನರಸಿಂಹಯ್ಯ, ಸಾವನದುರ್ಗ ನರಸಿಂಹಯ್ಯ ಶೆಟ್ಟಿ, ರಂಗನಾಥ, ಮಂಜುಳಾ, ಪಂಚಲಿಂಗಯ್ಯ ಇತರರು ಇದ್ದರು.